ಜಿಲ್ಲೆ

ಮೈಸೂರು ಮಲ್ಲಿಗೆ, ವೀಳ್ಯದೆಲೆ, ನಂಜನಗೂಡು ರಸಬಾಳೆ ಬೆಳೆಯಲು ಪ್ರೇರೇಪಣೆ

ಅವಿನಾಶ್ ಜೈನಹಳ್ಳಿ ಮೈಸೂರು

ಮೈಸೂರಿನ ಭೌಗೋಳಿಕ ವಿಶೇಷತೆಯ ಹೆಗ್ಗುರುತುಗಳಾಗಿರುವ ‘ಮೈಸೂರು ವೀಳ್ಯದೆಲೆ’, ‘ಮೈಸೂರು ಮಲ್ಲಿಗೆ’ ಹಾಗೂ ‘ನಂಜನಗೂಡು ರಸಬಾಳೆ’ಗಳನ್ನು ಹೆಚ್ಚು ರೈತರು ಬೆಳೆಯುವಂತೆ ಪ್ರೇರೇಪಿಸುವ ಮೂಲಕ ಮರೆಯಾಗಿರುವ ಪರಂಪರೆಯನ್ನು ಮತ್ತೆ ಸೃಷ್ಟಿಸಲು ರಾಜ್ಯ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಮುಂದಾಗಿದೆ.


ಮೈಸೂರಿಗೆ ತನ್ನದೇ ಆದ ದೊಡ್ಡ ಇತಿಹಾಸವಿದೆ. ಮೈಸೂರು ಈ ಹಿಂದೆ ಒಂದು ರಾಜ್ಯವಾಗಿ, ರಾಜ್ಯದ ರಾಜಧಾನಿಯಾಗಿಯೂ ಮೆರೆದಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಕ್ರೀಡೆ ಇನ್ನಿತರ ಕ್ಷೇತ್ರಗಳಲ್ಲಿ ಹಲವು ಹೆಗ್ಗುರುತುಗಳನ್ನು ಸ್ಥಾಪಿಸಿದೆ ಮತ್ತು ವಿಶೇಷಗಳನ್ನು ಉಳಿಸಿಕೊಂಡಿದೆ. ಮೈಸೂರು ಸಾಂಸ್ಕೃತಿಕ ರಾಜಧಾನಿ ಎಂದು ಕರೆಸಿಕೊಳ್ಳಲು ಇಂಥ ವಿಶೇಷತೆಗಳೇ ಕಾರಣ.


ಕರ್ನಾಟಕದ 42 ವಿಶೇಷತೆಗಳಿಗೆ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಸಿಕ್ಕಿದ್ದು, ಅದರಲ್ಲಿ ಮೈಸೂರಿನ 18 ಉತ್ಪನ್ನಗಳು ಸ್ಥಾನ ಪಡೆದಿರುವುದು ವಿಶೇಷ. ಈ ಪೈಕಿ ಒಂದು ಕಾಲದಲ್ಲಿ ಮೈಸೂರಿನ ಅಸ್ಮಿತೆಯಾಗಿ ಜನಮಾನಸದಲ್ಲಿ ನೆಲೆಯೂರಿದ್ದ ಜನಪ್ರಿಯ ಉತ್ಪನ್ನಗಳಾದ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಕಣ್ಮರೆಯಾಗುವುದನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಈ ವಿಶೇಷಗಳನ್ನು ಮುಂದಿನ ತಲೆಮಾರಿನವರೆಗೂ ಕಾಪಾಡುವ, ಇದರ ಬಗ್ಗೆ ಯುವಜನರಿಗೆ ತಿಳಿಸುವ, ಸಂಬಂಧಿಸಿದ ರೈತರು, ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಇವುಗಳನ್ನು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಬೆಳೆಯುವಂತೆ ರೈತರಲ್ಲಿ ಉತ್ತೇಜನ ನೀಡುತ್ತಿದೆ.

ವಿಶೇಷ ಕಂಪು, ರುಚಿ ಮತ್ತು ಸೊಗಡಿನ ಮೈಸೂರಿನ ಬ್ರ್ಯಾಂಡ್ ಆಗಿ ಮೆರೆದ ಈ ಮೂರು ಉತ್ಪನ್ನಗಳಿಗೆ ಇಂದಿಗೂ ಬೇಡಿಕೆ ಇದೆ, ಅದೇ ಖ್ಯಾತಿ ಇದೆ. ಆದರೆ, ಬೆಳೆಯುವವರ ಸಂಖ್ಯೆ ಕುಸಿಯುತ್ತಿದೆ. ಇಳುವರಿ ಕಡಿಮೆ, ನಿರ್ವಹಣಾ ವೆಚ್ಚ ಜಾಸ್ತಿ ಎಂಬುದೇ ಇದಕ್ಕೆ ಮೂಲ ಕಾರಣ. ಈ ಸನ್ನಿವೇಶವನ್ನು ದೂರಾಗಿಸಲು ಈಗಾಗಲೇ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ನರೇಗಾ ಯೋಜನೆಯಡಿ ಕಾರ್ಯಕ್ರಮ ರೂಪಿಸಿದೆ.

ಇದೀಗ ರಾಜ್ಯ ಸರ್ಕಾರವೂ ಈ ಬೆಳೆಗಳಿಗೆ ಸಂಪೂರ್ಣ ಉತ್ತೇಜನ ನೀಡುವುದಾಗಿ ಘೋಷಣೆ ಮಾಡಿದೆ. ಈ ಎರಡೂ ಪ್ರಯತ್ನದಿಂದ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ, ವೀಳ್ಯದೆಲೆ ಬೆಳೆಗಳು ಗತವೈಭವಕ್ಕೆ ಮರಳಬೇಕೆಂಬುದು ಸ್ಥಳೀಯರ ಒತ್ತಾಯ. ತಲಾ 25 ಎಕರೆ ಜಾಗದಲ್ಲಿ ಈ ಮೂರು ಬೆಳೆಗಳನ್ನು ಬೆಳೆಸಲು ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಮುಂದಾಗಿದೆ.

ತಲಾ 500 ರಸಬಾಳೆ ಗಿಡ ವಿತರಣೆ

ನಂಜನಗೂಡು ತಾಲೂಕಿನ ದೇವರಸನಹಳ್ಳಿ ಭಾಗದಲ್ಲಿ 15 ಎಕರೆ ಜಾಗದಲ್ಲಿ 10 ರೈತರು ರಸಬಾಳೆ ಬೆಳೆಯುತ್ತಿದ್ದಾರೆ. ಬೇರೆ ಕಡೆ ಈ ರಸಬಾಳೆ ಬೆಳೆದರೆ ತಿರುಳು ಗಂಟಾಗುತ್ತದೆ. ಜತೆಗೆ ಅಷ್ಟು ರುಚಿ ಇರುವುದಿಲ್ಲ. ಕಪ್ಪು, ಮೆಕ್ಕಲು ಹಾಗೂ ಲವಣಯುಕ್ತ ಮಣ್ಣು ಈ ತಳಿಗೆ ತುಂಬ ಮುಖ್ಯ. ಹೀಗಾಗಿ ಇದೇ ಭಾಗದಲ್ಲಿ 5 ಎಕರೆಯಲ್ಲಿ ಇಲಾಖೆಯಿಂದ ನಂಜನಗೂಡು ರಸಬಾಳೆ ಬೆಳೆಸಲಾಗುತ್ತಿದೆ. ಸದ್ಯ ತೋಟಗಾರಿಕೆ ಇಲಾಖೆಯಿಂದ ಇನ್ನೂ ಹೆಚ್ಚುವರಿ 20 ರೈತರಿಗೆ ತಲಾ 500 ರಸಬಾಳೆಯ ಗಿಡಗಳನ್ನು ವಿತರಣೆ ಮಾಡಲಾಗಿದೆ.

15 ರೈತರಿಗೆ ಮಲ್ಲಿಗೆ ಗಿಡ ವಿತರಣೆ

ಸದ್ಯ ಮೈಸೂರು ತಾಲೂಕಿನ ಇಲವಾಲದ ಸಮೀಪದಲ್ಲಿ ಮಾತ್ರ ಮೈಸೂರು ಮಲ್ಲಿಗೆ ಬೆಳೆಯುತ್ತಿದ್ದಾರೆ. ಆದರೆ, ಮಲ್ಲಿಗೆ ತಳಿ ಬಿತ್ತನೆ ದುಬಾರಿಯಾಗಿದೆ. ಬೆಳೆ ನಿರ್ವಹಣೆಗೂ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ರೈತರು ಮೈಸೂರು ಮಲ್ಲಿಗೆಯಿಂದ ವಿಮುಖರಾಗಿದ್ದಾರೆ. ಕೇವಲ ಒಂದು ಎಕರೆ ಜಾಗದಲ್ಲಿಒಬ್ಬ ರೈತರು ಬೆಳೆಯುತ್ತಿದ್ದರು. ಹೀಗಾಗಿ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಬಳಿ ನಾಲ್ಕು ಎಕರೆ ಜಾಗದಲ್ಲಿ ಮೈಸೂರು ಮಲ್ಲಿಗೆ ಬೆಳೆಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ 15 ರೈತರಿಗೆ ಮಲ್ಲಿಗೆ ಗಿಡ ನೀಡಲಾಗಿದೆ.

ವೀಳ್ಯದೆಲೆಗೆ ತನ್ನದೇ ಆದ ವೈಶಿಷ್ಟೃವಿದೆ

ಮೈಸೂರು ವೀಳ್ಯದೆಲೆಗೆ ದೇಶ ಹಾಗೂ ರಾಜ್ಯದಲ್ಲಿ ತನ್ನದೇ ಆದ ವೈಶಿಷ್ಟೃವಿದೆ. ಜಿಲ್ಲೆಯಲ್ಲಿ ವೀಳ್ಯದೆಲೆ ಬೆಳೆಗೆ ಪೂರಕ ವಾತಾವರಣ, ನೀರು, ಭೂಮಿ ಎಲ್ಲವೂ ಇದೆ. ಆದರೆ, ಬೆಲೆ ಮತ್ತು ಮಾರುಕಟ್ಟೆ ಸಮಸ್ಯೆ ಎದುರಾಗಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಮೈಸೂರು ತಾಲೂಕಿನ ಜಯಪುರ ಹೋಬಳಿಯ ಉದ್ಬೂರು, ಮಾರ್ಬಳ್ಳಿ, ಟಿ.ಕಾಟೂರು, ಗುಮಚನಹಳ್ಳಿ, ಕೆಲ್ಲಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಉದ್ಬೂರು ಗ್ರಾಮದಲ್ಲಿ ವೀಳ್ಯದೆಲೆ ಮಾರುಕಟ್ಟೆ ಇದ್ದು, ಪ್ರತಿದಿನ ಸಂಜೆ ವ್ಯಾಪಾರ ನಡೆಯುತ್ತದೆ.


ಮೈಸೂರು ವೀಳ್ಯದೆಲೆ ತನ್ನ ವಿಶಿಷ್ಟ ರುಚಿಯಿಂದಾಗಿ ರಾಜ್ಯದೆಲ್ಲೆಡೆ ಹೆಸರು ಪಡೆದಿದೆ. ನಗರೀಕರಣದ ಪರಿಣಾಮ ಮೈಸೂರಿನಲ್ಲಿ ವೀಳ್ಯದೆಲೆ ಬೆಳೆಯಲು ಜಾಗದ ಕೊರತೆ ಉಂಟಾಗಿದೆ. ಈಗ ರೈತರು 5 ಗುಂಟೆ, 10 ಗುಂಟೆ ಜಾಗದಲ್ಲಿ ವೀಳ್ಯದೆಲೆ ಬೆಳೆಯುತ್ತಿದ್ದಾರೆ.

‘ಮೈಸೂರು ವೀಳ್ಯದೆಲೆ’, ‘ಮೈಸೂರು ಮಲ್ಲಿಗೆ’ ಹಾಗೂ ‘ನಂಜನಗೂಡು ರಸಬಾಳೆ’ಯನ್ನು ಮುಂದಿನ ತಲೆಮಾರಿನವರೆಗೂ ಕಾಪಾಡುವ, ಇದರ ಬಗ್ಗೆ ಯುವಜನರಿಗೆ ತಿಳಿಸುವ, ಸಂಬಂಧಿಸಿದ ರೈತರು, ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ನಾನಾ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸದ್ಯ ರೈತರು ಈ ಬೆಳೆಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸಲು ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿರುವ ಗಿಡಗಳನ್ನು ನೀಡಲಾಗುತ್ತದೆ. ಆಸಕ್ತರು ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.ಕೆ.ರುದ್ರೇಶ್ ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ