ಹೊಳೆನರಸೀಪುರ: ತೆಂಗು ಬೆಳೆ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಮತ್ತು ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಪ್ರೋತ್ಸಾಹ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಘು ತಿಳಿಸಿದರು.
ತಾಲೂಕು ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಮೂಡಲಹಿಪ್ಪೆ ತೆಂಗು ಬೆಳೆಗಾರರಿಗೆ ಗೊಬ್ಬರ, ಕ್ರಿಮಿನಾಶಕ, ಬೇವಿನಎಣ್ಣೆ, ಟೋರಾಕ್ಸ್ ಇತರ ಸಲಕರಣೆಗಳನ್ನು ಬುಧವಾರ ವಿತರಿಸಿ ಮಾತನಾಡಿದರು.
ತೆಂಗುಬೆಳೆ ಅಭಿವೃದ್ಧಿಗೆ 2 ವರ್ಷ ಸಹಕಾರ ನೀಡಲು ತಾಲೂಕಿನ ಮೂಡಲಹಿಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 540 ಹೆಕ್ಟೇರ್ ಪ್ರದೇಶದ 800 ರೈತರನ್ನು ಗುರುತಿಸಲಾಗಿದೆ. ಅರ್ಧ ಎಕರೆಯಿಂದ 2.5 ಎಕರೆ ಪ್ರದೇಶದಲ್ಲಿ ಫಲ ಕೊಡುವ ತೆಂಗಿನ ಗಿಡಗಳನ್ನು ಹೊಂದಿರುವ ರೈತರು ಈ ಯೋಜನೆಗೆ ಅರ್ಹರಾಗುತ್ತಾರೆ ಎಂದರು.
ಇಂದು ನಾವು ಆಯ್ಕೆ ಮಾಡಿದ ಪ್ರತಿ ರೈತರಿಗೆ ಬೇವಿನಹಿಂಡಿ, ಹಸಿರೆಲೆ ಗೊಬ್ಬರದ ಬೀಜಗಳು,(ಡಯಾಂಚ) ಹೆಕ್ಸಾಕೇನೇಜೇಲ್, ಟೋರಾಕ್ಸ್, ಮೆಗ್ನಿಶಿಯಂ ಸಲ್ಫೇಟ್, 19 ಆಲ್ಟ್ರೆಕೇಡಮರ್ ಹಾಗೂ ಬೇವಿನಎಣ್ಣೆಗಳನ್ನು ನೀಡಲಿದ್ದು, 1 ಹೆಕ್ಟೇರಿಗೆ ನೀಡುವ ಇವುಗಳ ಬೆಲೆ 17,500 ರೂ.ಗಳಾಗುತ್ತದೆ. ಇದನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ರೈತ ಮುಖಂಡ ಕುಮಾರಸ್ವಾಮಿ ಮಾತನಾಡಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೆಂಗು ಬೆಳೆ ಅಭಿವೃದ್ಧಿಗೆ ಮೂಡಲಹಿಪ್ಪೆ ಹೋಬಳಿಯನ್ನು ಆಯ್ದುಕೊಂಡಿದ್ದಾರೆ. ತೋಟಗಾರಿಕೆ ಇಲಾಖೆಯ ನಿಯಮದಂತೆ ಇರುವ ಅರ್ಹ ರೈತರಿಗೆ ಸೌಲಭ್ಯ ಒದಗಿಸುತ್ತಿದ್ದಾರೆ. ಈ ಸೌಲಭ್ಯ ಮುಂದಿನ ವರ್ಷಕ್ಕೂ ಸಿಗಲಿದೆ. ಅರ್ಹ ರೈತರು ಸೌಲಭ್ಯ ಪಡೆದುಕೊಂಡು ತೆಂಗುಬೆಳೆಯನ್ನು ಅಭಿವೃದ್ಧಿಪಡಿಸಿಕೊಳ್ಳಿ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ತೋಟಗಾರಿಕೆ ಇಲಾಖೆ ಸೌಲಭ್ಯವನ್ನು ಬಳಸಿಕೊಂಡು ಉತ್ತಮ ತೆಂಗಿನ ಬೆಳೆಯನ್ನು ಬೆಳೆಯಿರಿ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ದೇವರಾಜೇಗೌಡ, ರೈತ ಮುಖಂಡರಾದ ಸುರೇಶ್, ಪ್ರಕಾಶ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.