ಗುಂಡ್ಲುಪೇಟೆ: ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲೆಗಳು ಶುಕ್ರವಾರ ಆರಂಭವಾಗಿದ್ದು, ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಎಲ್ಲ ಶಾಲೆಗಳಲ್ಲೂ ಸಡಗರ ಹಾಗೂ ವಿಶಿಷ್ಟವಾಗಿ ಆಚರಿಸುವ ಮೂಲಕ ವಿದ್ಯಾರ್ಥಿಗಳನ್ನು ತರಗತಿಗೆ ಶಿಕ್ಷಕರು ಬರ ಮಾಡಿಕೊಂಡರು. ಕೆಲ ಗ್ರಾಮಗಳಲ್ಲಿ ಎತ್ತಿನ ಗಾಡಿಗಳ ಮೇಲೆ ಮಕ್ಕಳನ್ನು ಮೆರವಣಿಗೆ ಮಾಡಿದರು. ಬ್ಯಾಂಡ್ ವಾದನದೊಂದಿಗೆ ಹೂ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ತಾಲೂಕಿನ ಲಕ್ಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊದಲ ದಿನ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೂ ಹಾಗೂ ಬಣ್ಣದ ಬಲೂನುಗಳನ್ನು ನೀಡಿ ಸ್ವಾಗತಿಸಿದರು. ಭೀಮನಬೀಡು ಹಾಗೂ ಹೊಂಗಹಳ್ಳಿ ಗ್ರಾಮಗಳಲ್ಲಿ ಅಲಂಕೃತ ಎತ್ತಿನ ಗಾಡಿಗಳ ಮೇಲೆ ಮಕ್ಕಳನ್ನು ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಶಾಲೆಗೆ ಕರೆತರಲಾಯಿತು.
ಉಚಿತ ನೋಟ್ ಬುಕ್ ಹಾಗೂ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲಾಯಿತು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ತಿಳಿಸಿದ್ದಾರೆ.