ವಿಜಯಪುರ: ಕೈಮಗ್ಗ ಉತ್ಪನ್ನಗಳಿಂದ ತಯಾರಿಸಿದ ವಸ್ತುಗಳನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಮೂಲಕ ನೇಕಾರರನ್ನು ಪ್ರೋತ್ಸಾಹಿಸಬೇಕೆಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ಕೆಇಬಿ ಕಲ್ಯಾಣ ಮಂಟಪದಲ್ಲಿ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ ಭಾರತ ಸರ್ಕಾರ, ನೇಕಾರರ ಸೇವಾ ಕೇಂದ್ರ ಬೆಂಗಳೂರು ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೈಮಗ್ಗ ಪ್ರದರ್ಶನ ಹಾಗೂ ಮಾರಾಟ ಮೇಳ-2023 ‘ತಾನಾ-ಬಾನಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೈಮಗ್ಗಗಳಿಂದ ತಯಾರಿಸಿದ ಉತ್ಪನ್ನಗಳು ಹೆಚ್ಚು ಬಾಳಿಕೆ ಹಾಗೂ ಉತ್ತಮ ಗುಣಮಟ್ಟದಿಂದ ಕೂಡಿರುತ್ತವೆ. ಸಾರ್ವಜನಿಕರು ಇಂತಹ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸಬೇಕು. ಆ ಮೂಲಕ ನೇಕಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ನೇಕಾರರನ್ನು ಪ್ರೋತ್ಸಾಹಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ, ನೇಕಾರರ ಉಜ್ವಲ ಭವಿಷ್ಯಕ್ಕಾಗಿ ಉತ್ಪನ್ನ ಹಾಗೂ ಆದಾಯ ಹೆಚ್ಚಿಸಲು ಸಹಾಯ ಸಹಕಾರ ನೀಡುವುದಾಗಿ ಹೇಳಿದರು.
ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಎನ್.ಟಿ. ನೆಗಳೂರ ಮಾತನಾಡಿ, ಕೈಮಗ್ಗ ಪ್ರದರ್ಶನ ಹಾಗೂ ಮಾರಾಟ ಮೇಳವು ಅ.19 ರಿಂದ 25ರವರೆಗೆ ನಡೆಯಲಿದ್ದು, ಈ ಮೇಳದಲ್ಲಿ 25ಕ್ಕೂ ಹೆಚ್ಚು ಮಳಿಗೆಗಳಿವೆ. ಗುಣಮಟ್ಟದ ಉತ್ಪನ್ನಗಳನ್ನು ಇರಿಸಲಾಗಿದೆ ಎಂದರು.
ಸಹಾಯಕ ನಿರ್ದೇಶಕ ಎಸ್. ಮಾರಿಮುತ್ತು ಮತ್ತಿತರರಿದ್ದರು.