ಜಿಲ್ಲೆ

ಸಾಮಾರ್ಥ್ಯಕ್ಕೆ ಅನುಗುಣವಾಗಿ ಕಲಿಕೆಗೆ ಪ್ರೋತ್ಸಾಹಿಸಿ

ಜಿ.ಹೆಚ್. ಧನ್ಯಕುಮಾರ್

ಕಡೂರು: ಶಿಕ್ಷಕರು ಮಕ್ಕಳ ಸಾಮಾರ್ಥ್ಯಕ್ಕೆ ಅನುಗುಣವಾಗಿ ಕಲಿಕೆಗೆ ಹೆಚ್ಚು ಪೋತ್ಸಾಹಿಸಿದಾಗ ಶೈಕ್ಷಣಿಕವಾಗಿ ಬೆಳವಣಿಗೆಯಾಗಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ವೆಂಕಟೇಶ್ವರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿ, ದೈನಂದಿನ ಶಿಕ್ಷಣದ ಕಲಿಕೆ ಜತೆಗೆ ತಮ್ಮ ಕೌಶಲ್ಯತೆ ಮೆರೆಯಲು ಕಲಿಕಾ ಹಬ್ಬದ ವೇದಿಕೆ ಸಹಕಾರಿಯಾಗುತ್ತದೆ ಎಂದರು.

ಇದಕ್ಕೆ ರಾಜ್ಯ ಸರ್ಕಾರವು ಮಕ್ಕಳ ಪ್ರತಿಭೆಯನ್ನು ವಿಶೇಷವಾಗಿ ಪರಿಗಣಿಸಲು ಶಾಲಾ ಹಂತದಲ್ಲಿಯೇ ಕಲಿಕೆಗೆ ಹೊಸ ಮೆರಗು ನೀಡುವ ಮೂಲಕ ಹಬ್ಬದ ವಾತಾವರಣ ಸೃಷ್ಟಿಸಿ ಒತ್ತು ನೀಡುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬ ಮಗುವಿನಲ್ಲೂ ಉತ್ತಮ ಕೌಶಲ್ಯತೆ ಇರುತ್ತದೆ. ಅದನ್ನು ಬೆಳಕಿಗೆ ತರುವ ಕೆಲಸವನ್ನು ಶಿಕ್ಷಕರು ಮತ್ತು ಪಾಲಕರು ಮಾಡಿದಾಗ ಅವರ ಕಲೆಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಅಗ್ನಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪಠ್ಯ ಪೂರಕ ಚಟುವಟಿಕೆಗಳು ಸಹಕಾರಿಯಾಗುತ್ತವೆ. ಸಾಹಿತ್ಯ, ಸಂಗತಿ, ಕಲೆ ಕ್ರೀಡೆಗಳಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರದ ಶಿಕ್ಷಣ ಕಲಿತರೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಸಿಆರ್‌ಪಿ ಬಿ.ಟಿ.ಪ್ರೇಮ್‌ಕುಮಾರ್, ಕೆ.ಡಿ.ನಾಗರಾಜ್, ಪ್ರಶಾಂತ್, ಶಾಲೆ ಮುಖ್ಯಶಿಕ್ಷಕ ಮಲ್ಲಿಕಾರ್ಜುನ್ ಹಾಗೂ ಶಿಕ್ಷಕಿಯರು ಇದ್ದರು.