ಮೈಸೂರು: ಗ್ರಂಥಾಲಯ ಶಾಲೆಗೆ ಹೆಚ್ಚು ಪ್ರಯೋಜನಕಾರಿ. ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಕುಂಬಾರಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಸು ಸಂಸ್ಥೆ ವತಿಯಿಂದ ಸ್ಥಾಪಿಸಿರುವ 100ನೇ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಶಾಲೆಯು ಗ್ರಂಥಾಲಯವನ್ನು ಹೊಂದಿರಬೇಕು. ಇದರಿಂದ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಮೂಡಿಸಲು ಅನುಕೂಲವಾಗುತ್ತದೆ ಎಂದರು.
ನಂತರ ಯದುವೀರ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ‘ನಿಮ್ಮ ವಿದ್ಯಾರ್ಥಿ ಜೀವನ ಹೇಗಿತ್ತು. ನಿಮ್ಮ ನೆಚ್ಚಿನ ಶಿಕ್ಷಕರು ಯಾರು? ಎಂಬ ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರಿಸಿದ ಅವರು, ತಾವು ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಓದಿದ್ದು, ದೈಹಿಕ ಶಿಕ್ಷಣ ಶಿಕ್ಷಕರು ನೆಚ್ಚಿನ ಶಿಕ್ಷಕರು ಎಂದು ಹೇಳಿ ತಮ್ಮ ವಿದ್ಯಾರ್ಥಿ ಜೀವನದ ಮೆಲುಕು ಹಾಕಿದರು.
ಉನ್ನತ ತಂತ್ರಜ್ಞಾನ ಬೇಕು: ಪ್ರತಿ ಶಾಲೆಗಳಲ್ಲಿ ಉನ್ನತ ತಂತ್ರಜ್ಞಾನದ ಅವಶ್ಯಕತೆ ಇದೆ. ಕೌಶಲ ಅಭಿವೃದ್ಧಿ ಭಾರತದಲ್ಲಿ ಅವಶ್ಯಕತೆ ಇದೆ. ವಿದ್ಯಾರ್ಥಿಗಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇರುತ್ತದೆಯೋ ಆ ವಿಷಯದಲ್ಲಿ ಹೆಚ್ಚು ಗಮನ ನೀಡಿ ಅಭ್ಯಾಸ ಮಾಡಬೇಕು ಎಂದು ಯದುವೀರ್ ಸಲಹೆ ನೀಡಿದರು.
ಕಲಿಸು ಫೌಂಡೇಷನ್‌ನ ಸಂಸ್ಥಾಪಕ, ಸಿಇಒ ಎಂ.ಎಂ. ನಿಖಿಲೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಲಿಕಾ ವಾತಾವರಣ ಮತ್ತು ಸೌಲಭ್ಯ ಸುಧಾರಿಸಲು ನಮ್ಮ ಸಂಸ್ಥೆ ಬದ್ಧ. ಗ್ರಂಥಾಲಯ ಮಾದರಿ ಮತ್ತು ಕಾರ್ಯಾಚರಣೆ ಕಾರ್ಯವಿಧಾನ ಪರಿಪೂರ್ಣಗೊಳಿಸಿದ್ದು, ವಿದ್ಯಾರ್ಥಿಗಳಲ್ಲಿ ಓದುವ ಕೌಶಲದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ ಎಂದರು.
ಶಿಕ್ಷಣ ಮತ್ತು ಮೂಲಸೌಕರ್ಯದ ಗುಣಮಟ್ಟ ಸುಧಾರಿಸಲಾಗುವುದು. ಈ ಹಿನ್ನೆಲೆಯಲ್ಲಿ ಹುಣಸೂರು, ಪಿರಿಯಾಪಟ್ಟಣ, ಕೊಡಗಿನ ಅನೇಕ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಅದರ ಕೆಲಸ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ವಿನ್ಯಾಸ, ಪರಿಕಲ್ಪನೆ ಅಭಿವೃದ್ಧಿ, ಚಿತ್ರಕಲೆ ಗೋಡೆಗಳು, ಪುಸ್ತಕದ ಕಪಾಟುಗಳು, ಟೇಬಲ್‌ಗಳು, ಪುಸ್ತಕಗಳು, ದೃಶ್ಯ ಸಾಧನಗಳು ಮತ್ತು ಕಲಾಕೃತಿ ರಚಿಸಿದ್ದು, ಮಕ್ಕಳಿಗೆ ಓದಲು ಸ್ಥಳ ಸೃಷ್ಟಿಸಲಾಗಿದೆ. ಧನಾತ್ಮಕ ಶಕ್ತಿ ಮತ್ತು ಪ್ರತಿ ಮಗುವಿನಲ್ಲಿ ಓದುವ ಆಸಕ್ತಿಯನ್ನು ಪ್ರಚೋದಿಸಲಾಗುವುದು.
ಲೈಬ್ರರಿಯು ಸ್ಮಾರ್ಟ್ ಟೆಲಿವಿಷನ್ ಹೊಂದಿದೆ. ಅದರ ಮೂಲಕ ಕಲಿಸು ಡಿಜಿಟಲ್ ಲೈಬ್ರರಿಯ ಮೂಲಕ ವಿದ್ಯಾರ್ಥಿಗಳಿಗೆ ಕಥೆಗಳನ್ನು ಯೋಚಿಸಬಹುದು. ಇದರೊಂದಿಗೆ ಗ್ರಂಥಾಲಯವು ವಿಶ್ವಕೋಶ, ಇತಿಹಾಸ, ಕಥೆ ಪುಸ್ತಕಗಳು, ಕಲೆ ಮತ್ತು ಸಂಸ್ಕೃತಿ, ಭೂಗೋಳ, ಕಾದಂಬರಿಗಳು, ಕ್ಲಾಸಿಕ್‌ಗಳು, ವಿಜ್ಞಾನ ಸೇರಿದಂತೆ ಸುಮಾರು 3,450 ಪುಸ್ತಕಗಳಿವೆ ಎಂದು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜವರೇಗೌಡ, ಮುಖಂಡರಾದ ರೇವಣ್ಣ, ನಾಗಶ್ರೀ, ಕೆ.ಎಸ್.ಮನೋಜ್, ಎಂ.ಎಂ. ವಿಘ್ನೇಶ್, ಮಹೇಶ್ ತಳವಾರ, ಎಂ.ಸಿ.ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕ ಲೋಹಿತೇಶ್ವರ ಇತರರು ಇದ್ದರು.