ಜಿಲ್ಲೆ

ಮೋಡಿ ಮಾಡಿದ ಶಾಸ್ತ್ರೀಯ ನೃತ್ಯ ಸಂಗೀತ

Hassan

ಹಳೇಬೀಡು: ಪುಷ್ಪಗಿರಿ ಉತ್ಸವದ ಪ್ರಯುಕ್ತ ಸಮೀಪದ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಶಾಸ್ತ್ರೀಯ ಲೋಕವನ್ನೇ ಸೃಷ್ಟಿಸಿತು.

ರಂಗಮಂದಿರದ ವೇದಿಕೆಯಲ್ಲಿ ಪ್ರದರ್ಶನಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ಮಂತ್ರ ಮುಗ್ಧರನ್ನಾಗಿಸಿತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಿರ್ದೇಶಕ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಅಂತಾರಾಷ್ಟ್ರೀಯ ಕೊಳಲು ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ ಅವರ ಜುಗಲ್ ಬಂದಿ ಕಲಾಸಕ್ತರ ಮನಸ್ಸನ್ನು ತಣಿಸಿತು.

ಮತ್ತೊಮ್ಮೆ ಮೋಡಿ ಮಾಡಿದ ಕಿಕ್ಕೇರಿ: ಸುಗಮ ಸಂಗೀತ ಕಲಾವಿದ ಕಿಕ್ಕೇರಿ ಕೃಷ್ಣಮೂರ್ತಿ ತಂಡ, ತಮ್ಮ ಸುಮಧುರ ಗಾಯನದ ಮೂಲಕ ನೆರೆದಿದ್ದವರನ್ನು ರಂಜಿಸಿತು. ನೇಗಿಲ ಯೋಗಿಯ ನೋಡಲ್ಲಿ ಎಂಬ ಹಾಡಿನೊಂದಿಗೆ ಗಾಯನ ಆರಂಭಿಸಿದ ತಂಡಕ್ಕೆ ಸಾರ್ವಜನಿಕರಿಂದ ಚಪ್ಪಾಳೆ ದೊರಕಿತು. ಬಳಿಕ ವರಕವಿ ಬೇಂದ್ರೆ ಅವರ ರಚನೆ ಶ್ರಾವಣ ಬಂತು ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಇದಲ್ಲದೆ, ಶಿಶುನಾಳ ಶರೀಫ ಹಾಗೂ ದಿ.ಸಿ. ಅಶ್ವತ್ಥ್ ಅವರ ಗೀತರಗಳನ್ನು ಹಾಡಲಾಯಿತು. ವೇದಿಕೆ ಕಾರ್ಯಕ್ರಮದ ನಡುವೆ ಕನ್ನಡನಾಡಿನ ಚರಿತ್ರೆ ಬಿಂಬಿಸುವ ಗೀತೆಗಳನ್ನು ಹಾಡಿ ಜನಮನ ರಂಜಿಸಿದರು.

ಭಾವಲೋಕಕ್ಕೆ ಕರೆದೊಯ್ದ ಕಥಕ್ ನೃತ್ಯ: ನಾಟ್ಯಾಂತರಂಗ ಸಂಸ್ಥೆಯ ಅಂತಾರಾಷ್ಟ್ರೀಯ ಕಲಾವಿದೆ ಶುಭಾ ಧನಂಜಯ ಮತ್ತು ತಂಡದವರು ಪ್ರದರ್ಶಿಸಿದ ಕಥಕ್ ನೃತ್ಯ ಜನರನ್ನು ಭಾವಲೋಕಕ್ಕೆ ಕರೆದೊಯ್ಯಿತು. ಏಕವ್ಯಕ್ತಿ ಪ್ರದರ್ಶನದಲ್ಲಿ ಗಣಪತಿಯ ಧ್ಯಾನ ಕೀರ್ತನೆಯೊಂದಿಗೆ ದಾಕ್ಷಿಣಾತ್ಯ ಶೈಲಿಯ ನೃತ್ಯ ಪ್ರಾಕಾರದೊಂದಿಗೆ ಆರಂಭವಾಗಿ ಉತ್ತರ ಭಾರತೀಯ ಶೈಲಿಯೊಂದಿಗೆ ಅಂತ್ಯವಾಯಿತು.

ಕೊಳಲು ನಾದಕ್ಕೆ ತಲೆದೂಗಿದ ಪ್ರೇಕ್ಷಕರು: ಪ್ರವೀಣ್ ಗೋಡ್ಖಿಂಡಿ ಮತ್ತು ತಬಲಾ ಸಾಥಿ ಕಿರಣ್ ಗೋಡ್ಖಿಂಡಿ ಅವರ ಜುಗಲ್‌ಬಂದಿಗೆ ಕಲಾಪ್ರೇಮಿಗಳು ತಲೆದೂಗಿದರು. ಹಂಸಧ್ವನಿ ರಾಗದ ವಾತಾಪಿ ಗಣಪತಿಂ ರಚನೆಯೊಂದಿಗೆ ವಾದನ ಆರಂಭಿಸಿದ ಅವರು, ಕೆಲ ವಿಶೇಷ ರಾಗಗಳನ್ನು ನುಡಿಸಿ ಕೊಳಲು ವಾದನದ ವೈಶಿಷ್ಟ್ಯತೆಯನ್ನು ಸಾರಿದರು. ಪ್ರೇಕ್ಷಕರ ಒತ್ತಾಯದ ಮೇರೆಗೆ ಕೆಲ ಸಿನಿಮಾ ಹಾಡುಗಳನ್ನೂ ನುಡಿಸಿ ಜನರನ್ನು ರಂಜಿಸಿದರು.
ಉದ್ಯಮಿ ಗ್ರಾನೈಟ್ ರಾಜಶೇಖರ್ ಅವರು ಗೋಡ್ಖಿಂಡಿ ಸಹೋದರರಿಗೆ ಪುಷ್ಪವೃಷ್ಟಿ ಮೂಲಕ ಗೌರವ ಸಮರ್ಪಿಸಿದರು.