ಜಿಲ್ಲೆ

ಜೆಡಿಎಸ್‌ಗೆ ಇನಾಯತ್‌-ಉಲ್ಲಾ ಷಾಬಂದ್ರಿ ರಾಜೀನಾಮೆ

ಭಟ್ಕಳ: ಜೆಡಿಎಸ್ ಪಕ್ಷ ಕೋಮುವಾದಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ನಮ್ಮನ್ನು ಕಡಗಣನೆ ಮಾಡಿದೆ. ಇದರಿಂದ ಮನನೊಂದು ಜೆಡಿಎಸ್‌ ಪಕ್ಷದ ಪ್ರಾಥಮಿಕ ಸದಸತ್ವದಿಂದ ರಾಜೀನಾಮೆ ನೀಡಿದ್ದೇನೆ ಎಂದು ಪಕ್ಷದ ಮುಖಂಡರಾಗಿದ್ದ ಇನಾಯತ್ ಉಲ್ಲಾ ಶಾಬಂದ್ರಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತ್ಯಾತೀತ ಸಿದ್ಧಾಂತದ ಅಡಿ ಜೆಡಿಎಸ್ ಇಷ್ಟು ದಿನ ಕಾರ್ಯನಿರ್ವಹಿಸುತಿತ್ತು. ಅದನ್ನು ಬೆಂಬಲಿಸಿ ನಾವು ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದೆ. ಆದರೆ, ಪಕ್ಷದ ವರಿಷ್ಠರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಕೋಮುವಾದಿ ಪಕ್ಷದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಜಾತ್ಯತೀತ ಸಿದ್ಧಾಂತದ ಹಿನ್ನಲೆ ಉಳ್ಳ ನನಗೆ ಪಕ್ಷದ ಈ ತಿರ್ಮಾನದಿಂದ ತೀವ್ರ ಬೇಸರ ಉಂಟಾಗಿದೆ.

ಕಳೆದ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ಅಲ್ಪ ಅಂತರದಲ್ಲಿ ಸೋಲನ್ನು ಅನುಭವಿಸಬೇಕಾಯಿತು. ನಂತರದ ಎರಡು ಬಾರಿ ತನಗೆ ಟಿಕೇಟ್ ನಿರಾಕರಿಸಲಾಯಿತು. ಆದರೂ ಪಕ್ಷದ ತೀರ್ಮಾನಕ್ಕೆ ಬದ್ದನಾಗಿ ಕಾರ್ಯನಿರ್ವಹಿಸಿದ್ದೆ. 4 ಸೀಟಿಗಾಗಿ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಪಕ್ಷದೊಂದಿದಿಗಿನ ರಾಜಿ ಪಕ್ಷದ ಹಲವು ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹಲವು ಮುಖಂಡರ ರಾಜಿನಾಮೆ ಪರ್ವ ಮುಂದುವರೆಯಲಿದೆ ಎಂದಿದ್ದಾರೆ.
ಅ.1ರಂದು ಕಲಬುರಗಿಯಲ್ಲಿ ನಡೆಯುವ ಅಲ್ಪಸಂಖ್ಯಾತರ ಸಭೆಯಲ್ಲಿ ಜಿಲ್ಲೆಯಿಂದ ಹಲವರು ಭಾಗವಹಿಸುತ್ತಾರೆ. ಅಲ್ಲಿ ಜಿಲ್ಲೆಯ ಮತ್ತಷ್ಟು ನಾಯಕರು ಸೇರಿ ಜೆಡಿಎಸ್‌ಗೆ ರಾಜಿನಾಮೆ ನೀಡುವವರಿದ್ದೇವೆ. ಅಲ್ಲಿ ನಮ್ಮ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನಕ್ಕೆ ಬರಲಾಗುವದು. ಆದರೆ ಕೋಮುವಾದಿ ಪಕ್ಷಕ್ಕೆ ನಾವು ಯಾವುದೆ ಕಾರಣಕ್ಕೂ ಬೆಂಬಲ ನೀಡುವದಿಲ್ಲ ಎಂದು ಅವರು ಹೇಳಿದ್ದಾರೆ.