ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿರಿಯ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರು ಬುಧವಾರ ಧಾರವಾಡಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಾರಾಯಣಪುರದಲ್ಲಿನ ಎನ್.ಪಿ. ಭಟ್ ನಿವಾಸಕ್ಕೆ ಭೇಟಿ ನೀಡಿದ್ದರು.
ಭೈರಪ್ಪ ಅವರು ಧಾರವಾಡ ಆಗಮಿಸಿದರೆ ಅವನಿ ರಸಿಕರ ರಂಗದ ಕಾರ್ಯಾಧ್ಯಕ್ಷರಾಗಿದ್ದ ಎನ್.ಪಿ. ಭಟ್ ನಿವಾಸಕ್ಕೆ ಭೇಟಿ ಸಹಜ. ಆದರೆ ಎನ್.ಪಿ. ಭಟ್ ನಿಧನ ಬಳಿಕ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬುಧವಾರ ಅವರ ಮನೆಗೆ ತೆರಳಿ ಪತ್ನಿ ಯಶೋಧಾ ಭಟ್ ಅವರ ಕುಶಲೋಪರಿ ವಿಚಾರಿಸಿದರು.
ಯಶೋಧಾ ಭಟ್ ಅವರ ಕುಶಲೋಪರಿ ವಿಚಾರಿಸಿದ ಬಳಿಕ ಎನ್.ಪಿ. ಭಟ್ ಅವರೊಂದಿಗೆ ಕಳೆದ ಸಮಯವನ್ನು ಮೆಲಕು ಹಾಕಿದರು. ಭಟ್ ಅವರ ಮದುವೆ ಸಂದರ್ಭದಲ್ಲಿನ ಸ್ವಾರಸ್ಯಕರ ವಿಚಾರಗಳನ್ನೂ ನೆನಪಿಸಿಕೊಂಡು ಅವರು, ಎನ್.ಪಿ. ಭಟ್ ಸಾಹಿತ್ಯ ಕ್ಷೇತ್ರ ಅಪಾರ ಆಸಕ್ತಿ ಹೊಂದಿದವರು. ಅವನಿ ರಸಿಕರ ರಂಗದ ಮೂಲಕ ಅನೇಕ ಕಾರ್ಯಗಳನ್ನು ನಡೆಸಿದ್ದಾರೆ ಎಂದು ನೆನಪಿಸಿಕೊಂಡರು.
ಭಟ್ ಅವರ ಪ್ರಕಾಶನದ ಮೂಲಕ ಹೊರ ತಂದಿರುವ ಕೃತಿಗಳ ಮಾಹಿತಿ ಪಡೆದ ಭೈರಪ್ಪ, ಕೆಲ ಕೃತಿಗಳನ್ನು ಕೇಳಿ ಪಡೆದರು. ಇನ್ನು ಬ್ರಿಗೇಡಿಯರ್ ಭಾಗವತ್ ಅವರ ಜತೆಗೆ ಲಡಾಕ್, ಸಿಯಾಚಿನ್ ಪ್ರದೇಶಗಳ ಕುರಿತು ಮಾತುಕತೆ ನಡೆಸಿದರು. ಸಿಯಾಚಿನ್ ಪ್ರದೇಶದಲ್ಲಿನ ಸ್ಥಿತಿಗತಿ ಸೇರಿ ಇನ್ನೂ ಅನೇಕ ವಿಚಾರಗಳು ಕುರಿತು ಚರ್ಚೆ ನಡೆಸಿದರು.
ಇದಕ್ಕೂ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಆಗಮಿಸುವಾಗ ಉಣಕಲ್ ಕೆರೆಗೆ ತೆರಳಿ ಕೆಲ ಹೊತ್ತು ಕಾಲ ಕಳೆದರು. ಅವರು ಹುಬ್ಬಳ್ಳಿಯಲ್ಲಿ ಇದ್ದ ಸಮಯದಲ್ಲಿ ಉಣಕಲ್ ಕೆರೆಗೆ ಆಗಾಗ ಭೇಟಿ ನೀಡುತ್ತಿದ್ದರು. ಇದೀಗ ಕೆರೆ ಅಭಿವೃದ್ಧಿಯಾದ ಬಳಿಕ ಅದರ ಅಂದ ಮತ್ತಷ್ಟು ಹೆಚ್ಚಿದೆ ಎಂಬ ಕಾರಣಕ್ಕೆ ಕೆಲ ಹೊತ್ತು ಕೆರೆಯ ವಿಹಂಗಮ ನೋಟ ವೀಕ್ಷಿಸಿ, ಅದರ ಮಾಹಿತಿ ಪಡೆದುಕೊಂಡರು.
ಯಶೋಧಾ ಭಟ್, ಸುಮಂಗಲಾ ಭಟ್, ಎಂ.ಎ. ಸುಬ್ರಹ್ಮಣ್ಯ, ಇತರರು ಇದ್ದರು.