ಜಿಲ್ಲೆ

ಪಾರ್ಕಿಂಗ್ ಸಮಸ್ಯೆಗೆ ಮಾಗೋಪಾಯ; ಕಾರ್ ಶೆಡ್​ಗಳಾದ ಖಾಲಿ ಸೈಟ್​ಗಳು

malli

ಬೆಂಗಳೂರಿನಲ್ಲಿ ಖಾಲಿ ನಿವೇಶನಗಳಿಗೆ ಬೇಡಿಕೆ ಕುದುರಿದೆ. ಯಾವ್ಯಾವುದೋ ಕಾರಣಕ್ಕೆ ಖಾಲಿ ಬಿದ್ದಿರುವ ನಿವೇಶನಗಳು ಕಾರುಗಳ ರ್ಪಾಂಗ್ ಸ್ಥಳವಾಗಿ ಮಾರ್ಪಾಡಾಗುತ್ತಿವೆ. ಸ್ಥಳೀಯರೇ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಿ ಕಾರುಗಳ ನಿಲುಗಡೆ ಸ್ಥಳವನ್ನಾಗಿ ಬಳಸಲು ಮುಂದಾಗಿದ್ದಾರೆ. ಇದು ನಿವೇಶನ ಮಾಲೀಕರಿಗೆ ಬಾಡಿಗೆ ರೂಪದಲ್ಲಿ ಕಾಸು ಬಂದರೆ ಕಾರು ಮಾಲೀಕರು ತಮ್ಮ ವಾಹನ ನಿಲುಗಡೆಗೆ ಸುರಕ್ಷಿತ ಜಾಗ ಸಿಕ್ಕಿತೆಂಬ ಸಮಾಧಾನಕ್ಕೆ ಕಾರಣವಾಗುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಕಾರುಗಳದ್ದೇ ದರ್ಬಾರು. ಸಣ್ಣಪುಟ್ಟ ವಾಹನಗಳಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಕಾರುಗಳಿವೆ. ಒಂದೇ ಮನೆಯಲ್ಲಿ ನಾಲ್ಕೈದು ಕಾರುಗಳು ಸಾಮಾನ್ಯ ಎನ್ನುವಂತಾಗಿದೆ. ಆದರೆ ಕಾರು ಮಾಲೀಕರಿಗೆ ತಮ್ಮ ಕಾರುಗಳ ನಿಲುಗಡೆಯದ್ದೇ ದೊಡ್ಡ ಚಿಂತೆಯಾಗಿದೆ. ರಸ್ತೆ ಬದಿಗಳಲ್ಲಿ, ನೆರೆಹೊರೆಯವರ ಮನೆ ಕಾಂಪೌಂಡ್ ಬಳಿ, ಪಾರ್ಕ್ ಗಳ ಸುತ್ತಮುತ್ತ ಹೀಗೆ ಎಲ್ಲೆಂದರಲ್ಲಿ ಜಾಗ ಸಿಕ್ಕ ಕಡೆ ಕಾರುಗಳ ನಿಲುಗಡೆ ಮಾಡಲಾಗುತ್ತದೆ. ಇದರಿಂದ ತಮ್ಮ ಪ್ರೀತಿಪಾತ್ರ ಕಾರುಗಳಿಗೆ ಸೇಫ್ ಜಾಗದ ಹುಡುಕಾಟದಲ್ಲಿರುವ ಮಾಲೀಕರಿಗೆ ಏರಿಯಾದಲ್ಲಿನ ಖಾಲಿ ನಿವೇಶನಗಳು ವರದಾನವಾಗಿವೆ.

ನಿವೇಶನ ಮಾಲೀಕರಿಗೆ ಲಾಭ

ನಗರದಲ್ಲಿ ನಿವೇಶನ ಖರೀದಿಯೇ ಕಷ್ಟ ಸಾಧ್ಯ. ಕಸರತ್ತು ನಡೆಸಿ ನಿವೇಶನ ಖರೀದಿಸಿದರೂ ಅದರಲ್ಲಿ ಕನಸಿನ ಕಟ್ಟಡ ನಿರ್ಮಾಣ ಕೆಲವೊಮ್ಮೆ ಕನಸಾಗಿಯೇ ಉಳಿದು ಬಿಡುತ್ತದೆ. ಇಂಚು ಭೂಮಿಗೂ ಚಿನ್ನದ ಬೆಲೆ ಇರುವಾಗ ಖಾಲಿ ನಿವೇಶವಿದ್ದರೂ ಆದಾಯವಿಲ್ಲವಲ್ಲ ಎಂದು ಕೊರಗುವ ನಿವೇಶನ ಮಾಲೀಕರಿಗೆ ಕಾರ್​ಶೆಡ್ ಕಾನ್ಸೆಪ್ಟ್ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಗಿಡಗಂಟಿಗಳು ಬೆಳೆದು, ಕಸ ಸುರಿವ ತಾಣವಾಗುತ್ತಿರುವ ಅನೇಕ ಖಾಲಿ ನಿವೇಶನಗಳು ಸ್ವಚ್ಛಗೊಂಡು ಕಾರ್ ಶೆಡ್​ಗಳ ರೂಪ ಪಡೆಯುತ್ತಿವೆ. ಬಿಡಿಗಾಸು ಲಾಭವಿಲ್ಲದಂತಿದ್ದ ನಿವೇಶನಗಳು ಕಮರ್ಷಿಯಲ್ ರೂಪದೊಂದಿಗೆ ಆದಾಯ ತರುತ್ತಿದೆ.

ಕಳ್ಳರ ಕಾಟ

ಮನೆಯಿಂದ ಹೊರಗೆ ನಿಲ್ಲಿಸುವ ಕಾರುಗಳಿಗೆ ಕಾರುಗಳ್ಳರ ಕಾಟ ಬೇರೆ. ಕಾರುಗಳ ಟಯರ್ ಬಿಚ್ಚುವುದು, ಸ್ಟಿರಿಯೋ ಕದಿಯುವುದು ಸಾಮಾನ್ಯವಾಗಿದೆ. ರಸ್ತೆ ಬದಿ ನಿಲ್ಲಿಸಿದರೆ ಅಪರಿಚಿತ ವಾಹನಗಳು ಡಿಕ್ಕಿಯೊಡಿಯುವ ಸಾಧ್ಯತೆಯೂ ಹೆಚ್ಚಿರುತ್ತದೆ. ಕೆಲವು ವೇಳೆ ಪುಂಡರು ಕಾರಿನ ಗ್ಲಾಸ್ ಒಡೆದು ವಿಕೃತಿ ಮೆರೆಯುತ್ತಾರೆ. ದೂರದಲ್ಲೆಲ್ಲೋ ಕಾರುಗಳನ್ನು ನಿಲ್ಲಿಸುವ ಬದಲು ನೆರೆಹೊರೆಯಲ್ಲಿಯೇ ಕಾರು ಶೆಡ್ ನೋಡಿಕೊಳ್ಳುವುದು ಎಲ್ಲದಕ್ಕೂ ಪರಿಹಾರ ಎಂಬ ಸತ್ಯಕ್ಕೆ ಕಾರು ಮಾಲೀಕರು ಮೊರೆಹೋಗಿದ್ದಾರೆ.

ಶೆಡ್​ಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು

ಹಾಳು ಬಿದ್ದಿರುವ ಖಾಲಿ ನಿವೇಶನಗಳನ್ನು ಕಾರು ನಿಲುಗಡೆ ಸ್ಥಳವಾಗಿ ಮಾರ್ಪಾಡಿಸುವುದರೊಂದಿಗೆ ಅಲ್ಲಿ ನಿಲ್ಲುವ ಕಾರುಗಳಿಗೆ ಸೇಫ್ಟಿ್ಟ ನೀಡುವುದು ಅಷ್ಟೇ ಮುಖ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನಿವೇಶನ ಮಾಲೀಕರು ನಿವೇಶನ ಸುತ್ತಲೂ ತಂತಿ ಬೇಲಿ, ಅಥವಾ ಕಾಂಪೌಡ್ ಜತೆಗೆ ಸಿಸಿ ಕ್ಯಾಮರಾಗಳ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. 30ಗಿ40 ಅಳತೆಯ ನಿವೇಶನವಾದರೆ ಏನಿಲ್ಲವೆಂದರೂ ಆರೇಳು ಕಾರುಗಳ ನಿಲುಗಡೆಗೆ ತೊಂದರೆ ಇಲ್ಲ. ಇನ್ನೂ ಹೆಚ್ಚಿನ ವಿಸ್ತೀರ್ಣವಿದ್ದರೆ ಹೆಚ್ಚು ಕಾರುಗಳ ನಿಲುಗಡೆಗೆ ಅವಕಾಶ ಸಿಗಲಿದೆ. ಸಣ್ಣ ಕಾರಿಗೆ ಇಷ್ಟು ದೊಡ್ಡಕಾರಿಗೆ ಅಷ್ಟು ಎಂದು ಮೊತ್ತ ನಿಗದಿಪಡಿಸಲಾಗುತ್ತಿದೆ. ಕೆಲವೊಂದು ಕಡೆಗಳಲ್ಲಿ ಸಣ್ಣ ಕೊಠಡಿ ನಿರ್ವಿುಸಿ ಭದ್ರತಾ ಸಿಬ್ಬಂದಿ ನೇಮಿಸುತ್ತಿರುವ ಉದಾಹರಣೆಗಳು ಕಂಡುಬರುತ್ತಿವೆ.

ಒಟ್ಟಿನಲ್ಲಿ ಹಾದಿ ಬೀದಿಯಲ್ಲಿ ಕಾರು ನಿಲ್ಲಿಸಿ ನೆಮ್ಮದಿ ಇಲ್ಲದೆ ಮಲಗುತ್ತಿದ್ದ ಕಾರು ಮಾಲೀಕರುಗಳಿಗೆ ಖಾಲಿ ನಿವೇಶನದ ಶೆಡ್​ನಿಂದ ನಿರಾಳತೆ ಮೂಡಿದೆ. ಯಾವುದೇ ಆದಾಯವಿಲ್ಲದೆ ಖಾಲಿ ಬಿದ್ದಿದ್ದ ನಿವೇಶನದಿಂದ ನಿವೇಶನ ಮಾಲೀಕರ ಜೇಬಿಗೂ ಹಣ ಬಂದು ಬೀಳುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಇಂಥಹದ್ದೊಂದು ಸಮನ್ವಯತೆ ಬೆಳವಣಿಗೆ ಇತ್ತೀಚಿಗೆ ಜಾಸ್ತಿಯಾಗುತ್ತಿದೆ.

ಮಳೆಗಾಳಿ ಭೀತಿ

ರಸ್ತೆಗಳಲ್ಲಿ ನಿಲ್ಲಿಸುವ ಬಹುತೇಕ ಕಾರು ಮಾಲೀಕರಿಗೆ ಗಾಳಿ ಮಳೆಯ ಭೀತಿ ಸಹಜ. ಬಿರುಗಾಳಿ ಮಳೆಗೆ ರಸ್ತೆ ಬದಿ ಮರಗಳು ಬಿದ್ದು ಕಾರುಗಳು ಡ್ಯಾಮೇಜ್ ಆಗುವುದು ಸಾಮಾನ್ಯ. ಆದರೆ ಅಪಾಯವಿದ್ದರೂ ಬೇರೆ ದಾರಿಯಿಲ್ಲದೇ ರಸ್ತೆ ಬದಿ ಕಾರು ನಿಲುಗಡೆ ಅನಿವಾರ್ಯವಾಗಿದೆ. ಖಾಲಿ ನಿವೇಶನಗಳಲ್ಲಿ ಜಾಗ ದೊರೆತರೆ ‘ಅಬ್ಬಾ ಕಾರು ಸೇಫ್’ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ. ತಿಂಗಳಿಗಿಂತಿಷ್ಟು ಅಂತ ಪಾವತಿಸಿದರೆ ಕಾರುಗಳು ಸುರಕ್ಷಿತ ವಾಗಿರುತ್ತವೆ ಎಂಬ ನಿಟ್ಟಿನಲ್ಲಿ ಕಾರು ಮಾಲೀಕರು ನಿವೇಶನಗಳ ಮಾರ್ಪಾಡಿಗೆ ನಿವೇಶನ ಮಾಲೀಕರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.

ಪುಂಡರಿಂದ ರಕ್ಷಣೆ

ಇತ್ತೀಚಿಗೆ ನಗರದಲ್ಲಿ ಪುಂಡರ ಪುಂಡಾಟಕ್ಕೆ ರಸ್ತೆ ಬದಿಯ ವಾಹನಗಳು ಬಲಿಯಾಗುತ್ತಿರುವುದು ಸಾಮಾನ್ಯವಾಗಿದೆ. ಕಾರುಗಳ ಗ್ಲಾಸ್ ಪುಡಿ ಮಾಡುವುದು, ವಾಹನಗಳಿಗೆ ಬೆಂಕಿ ಹಚ್ಚುವುದು, ಇನ್ಯಾವುದೋ ರೂಪದಲ್ಲಿ ಡ್ಯಾಮೇಜ್ ಮಾಡುವುದು ಸಾಮಾನ್ಯವಾಗಿದೆ. ತಡರಾತ್ರಿಗಳಲ್ಲಿ ಕುಡುಕರ ಕಾಟಕ್ಕೂ ವಾಹನಗಳು ಬಲಿಯಾಗುತ್ತಿವೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಕಾರುಗಳ ನಿಲುಗಡೆಗೆ ಒಳ್ಳೆಯ ಜಾಗ ಎಲ್ಲರಿಗೂ ಬೇಕು.

| ಶಿವರಾಜ ಎಂ.