ಜಿಲ್ಲೆ

ಉದ್ಯೋಗ ಭದ್ರತೆ ಕಲ್ಪಿಸಲು ಕಾರ್ಮಿಕರ ಆಗ್ರಹ

Belagavi

ಬೆಳಗಾವಿ: ಬೆಳಗಾವಿಯ ಉತ್ತರ ಮತ್ತು ದಕ್ಷಿಣ ವಿಭಾಗದ ಜಲಮಂಡಳಿಯಲ್ಲಿ 25 ವರ್ಷಗಳಿಂದ ವಾಟರ್‌ಮನ್, ಪಂಪ್ ಆಪರೇಟರ್, ಕೂಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಕೂಲಿ ಕಾರ್ಮಿಕರು ಉದ್ಯೋಗ ಭದ್ರತೆ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿಗೆ ಬುಧವಾರ ಮನವಿ ಸಲ್ಲಿಸಿದರು.

2006ರಲ್ಲಿ ಮಹಾನಗರ ಪಾಲಿಕೆಯಿಂದ 60 ಸಿಬ್ಬಂದಿಯನ್ನು ಜಲಮಂಡಳಿಗೆ ವರ್ಗಾಯಿಸಿದ್ದಾರೆ. ಈಗ ಮತ್ತೆ ನಮ್ಮನ್ನು ನಿರಂತರ ನೀರು ಸರಬರಾಜು ವಿಭಾಗಕ್ಕೆ ವರ್ಗಾಯಿಸುವುದಾಗಿ ತಿಳಿದು ಬಂದಿದೆ. ಹೀಗಾಗಿ, ನಿರಂತರ ನೀರು ಸರಬರಾಜು ವಿಭಾಗಕ್ಕೆ ವರ್ಗಾಯಿಸಿದರೆ, ಈಗಿರುವ ಹುದ್ದೆಯಲ್ಲಿಯೇ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು. ನಮಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವಾಟರ್‌ಮನ್ ಸುಬ್ರಮಣಿಯನ್ ಕಾಂಬಳೆ ಮಾತನಾಡಿ, ಬೆಳಗಾವಿ ನಗರಕ್ಕೆ ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನ
ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿರುವುದು ಸಂತಸದ ಸಂಗತಿ. ನಿರಂತರ ನೀರು ಸರಬರಾಜು ಯೋಜನೆ ಕಾಮಗಾರಿಯನ್ನು ಚನ್ನೈ
ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದ ಕಂಪನಿ, 25 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು.

ಇಲ್ಲದಿದ್ದರೆ ನಮ್ಮ ಬದುಕು ಬೀದಿಗೆ ಬೀಳುತ್ತದೆ ಆತಂಕ ವ್ಯಕ್ತಪಡಿಸಿದರು. ಮಂಜುನಾಥ ದೊಡವಾಡ, ನಾಗರಾಜ ಬದಾಮಿ, ವಿಠ್ಠಲ ಕಾಂಬಳೆ, ಬಾಬು ತಳವಾರ ಇತರರಿದ್ದರು.