ವಿಜಯಪುರ: ಜಿಲ್ಲೆಯ 5000 ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಉದ್ಯೋಗ ದೊರಕಿಸಲು ಯೋಜನೆ ರೂಪಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದರು.
ಬಬಲೇಶ್ವರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮಾಂತರ ವಿದ್ಯಾವರ್ದಕ ಸಂಘದ ವಜ್ರಮಹೋತ್ಸವ, ಶ್ರೀ ಶಾಂತವೀರ ಮಹಾಸ್ವಾಮಿಗಳ ಪುಣ್ಯಾರಾಧನೆ ಹಾಗೂ ಗೆಳೆಯರ ಬಳಗದ ಸ್ಮಾರಕ ಭವನ ಉದ್ಘಾಟನೆ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಟೊಯೋಟಾ ಕಂಪನಿ ಈಗಾಗಲೇ ವಿಜಯಪುರದಲ್ಲಿ ಎರಡು ದಿನಗಳ ಉದ್ಯೋಗ ಮೇಳ ನಡೆಸಿದ್ದು ನೂರಾರು ಯುವಕರು ಉದ್ಯೋಗ ಪಡೆಯಲಿದ್ದಾರೆ. ಇನ್ನೂ ಹೆಸರಾಂತ ಕಂಪನಿಗಳ ಮೂಲಕ ಉದ್ಯೋಗ ಮೇಳ ಆಯೋಜಿಸಿ ಉದ್ಯೋಗ ಸೃಷ್ಟಿ ಮಾಡಲಾಗುವುದು. ಅಲ್ಲದೇ, ಸಂಘದ ವತಿಯಿಂದ ಟೆಕ್ನಿಕಲ್ ಕೋರ್ಸ್ ಪ್ರಾರಂಭಿಸಲು ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದರು.
ಶ್ರೀ ಶಾಂತವೀರ ಮಹಾಸ್ವಾಮಿಗಳು ನಾಡು ಕಂಡ ಶ್ರೇಷ್ಠ ಸಂತರಾಗಿದ್ದಾರೆ. ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಜವಾಬ್ದಾರಿಯುವ ನಾಗರಿಕರನ್ನಾಗಿ ರೂಪಿಸಿ ಉನ್ನತ ಸಾಧನೆ ಮಾಡಲು ನೆರವಾಗಿದೆ. ಹೀಗಾಗಿ ಶಾಂತವೀರ ಸ್ಮಾಮಿಗಳ ಹೆಸರಿನಲ್ಲಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಇದೇ ವೇಳೆ ವಿವಿ ಕುಲಪತಿ ಬಿ. ಕೆ. ತುಳಸಿಮಾಲಾ ಅವರಿಗೆ ತಿಳಿಸಿದರು. ಅಲ್ಲದೇ ಬಬಲೇಶ್ವರ ಗ್ರಾಮಾಂತರ ವಿದ್ಯಾವರ್ಧಕ ಸಂಘದ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಎಂದರು.
ತುಮಕೂರು ಸಿದ್ದಗಂಗಾ ಮಹಾಸಂಸ್ಥಾನಮಠದ ಪೀಠಾಧಿಪತಿ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ರಾಜ್ಯದಲ್ಲಿ ಮಠಗಳು ನೀಡುತ್ತಿರುವ ದಾಸೋಹ ಮತ್ತು ಶಿಕ್ಷಣದಿಂದಾಗಿ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಠಗಳ ಕೊಡುಗೆ ಅಪಾರ ಎಂದರು.
ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠ, ಬಬಲೇಶ್ವರ ಬೃಹನ್ಮಠದ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಮಠದ ಶ್ರೀಗಳಿಗೂ ಬಬಲೇಶ್ವರದ ಶ್ರೀ ಶಾಂತವೀರ ಮಹಾಸ್ವಾಮಿಗಳಿಗೂ ಅವಿನಾಭಾವ ಸಂಬಂಧವಿತ್ತು. ಸಿದ್ದಗಂಗಾ ಶಿಕ್ಷಣ ಸಂಸ್ಥೆಯಂತೆ ನಮ್ಮ ಶಿಕ್ಷಣ ಸಂಸ್ಥೆ ಬೆಳೆಯಲಿ. ಸಚಿವ ಎಂ.ಬಿ. ಪಾಟೀಲರು ನಮ್ಮ ಜಿಲ್ಲೆಯನ್ನು ದೇಶದ ಕ್ಯಾಲಿಫೋರ್ನಿಯಾ ಆಗುವಂತೆ ಅಭಿವೃದ್ಧಿ ಮಾಡಿದ್ದಾರೆ. ಅವರು ಬೇಗ ಸಿಎಂ ಆಗುವ ಅವಕಾಶ ಪ್ರಾಪ್ತವಾಗಲಿ ಎಂದು ಆಶೀರ್ವದಿಸಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲಾ ಮಾತನಾಡಿ, ಶಾಂತವೀರ ಶ್ರೀಗಳ ತ್ಯಾಗ, ಸಮಾಜಸೇವೆ ಸ್ಮರಣೀಯ. ನಮಗೆಲ್ಲರಿಗೂ ಅವರು ಆದರ್ಶಪ್ರಾಯರು ಎಂದರು.
ಗ್ರಾಮಾಂತರ ವಿದ್ಯಾವರ್ಥಕ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎನ್. ಬಿರಾದಾರ ಮಾತನಾಡಿದರು. ಪಡಸಲಗಿಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಗುಣದಾಳದ ವಿವೇಕಾನಂದ ದೇವರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್.ಆರ್. ಹಂಚಿನಾಳ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮುಖಂಡರಾದ ಡಾ. ವಿ.ಎಂ. ಬಿಳೂರ, ಡಿ.ಪಿ. ಹಂಚಿನಾಳ, ಅರವಿಂದ ಮಿರ್ಜಿ, ಡಿ.ಎಸ್. ಅಲಗೊಂಡ, ನಿವೃತ್ತ ಡಿಡಿಪಿಐ ಡಾ. ಎಸ್.ವೈ. ಹಳಿಂಗಳಿ, ಡಿ.ಎಸ್. ಕೋಕರೆ, ಮನೋಹರ ಜಂಗಮಶೆಟ್ಡಿ, ಬಿ.ಎಸ್. ಬಿರಾದಾರ, ವಿ.ಎಸ್. ಪಾಟೀಲ, ಬಿ.ಜಿ. ಬಿರಾದಾರ, ತಹಸೀಲ್ದಾರ್ ಸಂತೋಷ ಮ್ಯಾಗೇರಿ ಮತ್ತಿತರರಿದ್ದರು.
ವಿ.ಆರ್. ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ. ರೆಬಿನಾಳ ನಿರೂಪಿಸಿದರು. ಮಲ್ಲಿಕಾರ್ಜುನ ಅವಟಿ ವಂದಿಸಿದರು.