ಜಿಲ್ಲೆ

ಗ್ರಾಮಕ್ಕೆ ವಾಪಸು ಬಂದವರಿಗೆ ಉದ್ಯೋಗ ಖಾತ್ರಿ

ಗಿರೀಶ ದೇಶಪಾಂಡೆ ಹಾನಗಲ್ಲ
ಕರ್ಫ್ಯೂ ಘೊಷಣೆಯಾಗಿದ್ದರಿಂದ ನಗರ ಪ್ರದೇಶಗಳಿಂದ ಗ್ರಾಮಕ್ಕೆ ಆಗಮಿಸಿದ ಬಡ ಕೂಲಿ ಕಾರ್ವಿುಕರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಆಶಾಕಿರಣವಾಗಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಆಸಕ್ತರಿಗೆ ತಕ್ಷಣವೇ ಉದ್ಯೋಗ ಚೀಟಿಯೊಂದಿಗೆ ಕೆಲಸ ನೀಡಲು ಗ್ರಾಪಂಗಳೂ ಮುಂದಾಗುತ್ತಿವೆ. ಗ್ರಾಮ ಪಂಚಾಯಿತಿಗಳು ರೂಪಿಸಿರುವ ಕ್ರಿಯಾಯೋಜನೆ ಆಧರಿಸಿ, ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದೆ. ದುಡಿಯೋಣ ಬಾ ಅಭಿಯಾನದಡಿ ಪ್ರತಿ ವ್ಯಕ್ತಿಗೆ 60 ದಿನಗಳವರೆಗೆ ಕೆಲಸ ಒದಗಿಸಲಾಗುತ್ತಿದೆ. ಹೀಗಾಗಿ, ತಾಲೂಕಿನ 42 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3711 ಕಾಮಗಾರಿಗಳನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ.
ಜಲಶಕ್ತಿ ಅಭಿಯಾನ: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 100 ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಸರ್ಕಾರ ಆರಂಭಿಸಿರುವ ಜಲ ಶಕ್ತಿ ಯೋಜನೆಯಡಿ ಜಲಮೂಲಗಳ ಅಭಿವೃದ್ಧಿ ಹಾಗೂ ಪುನಃಶ್ಚೇತನ ಕೈಗೊಳ್ಳಲು ಉದ್ಯೋಗಖಾತ್ರಿ ಯೋಜನೆಯಲ್ಲಿ ಅವಕಾಶ ದೊರೆತಿದೆ. ಇದರಲ್ಲಿ ತಾಲೂಕಿನಲ್ಲಿ ಹೊಸದಾಗಿ 5 ಕೆರೆಗಳ ನಿರ್ವಣ, ಕೆರೆಗಳ ಹೂಳೆತ್ತುವ ಕಾಮಗಾರಿ, ಕೆರೆಗಳ ಸೌಂದಯೀಕರಣ, ಕೆರೆ ಸ್ವಚ್ಛಗೊಳಿಸುವುದು, ಕೆರೆಗಳಿಗೆ ಬಂಡ್ ನಿರ್ವಿುಸುವುದು, ಕೊಳವೆಬಾವಿಗಳಿಗೆ ನೀರು ಮರುಪೂರಣ ಕಾಮಗಾರಿಗಳಲ್ಲಿ ಈಗ ತಾಲೂಕಿನಾದ್ಯಂತ 5 ಸಾವಿರ ಕೂಲಿ ಕಾರ್ವಿುಕರು ಕೆಲಸ ನಿರ್ವಹಿಸುತ್ತಿದ್ದಾರೆ. ತಾಲೂಕಿನ 42 ಗ್ರಾಪಂ ಪೈಕಿ 27 ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ತಲಾ 9 ಲಕ್ಷ ರೂಪಾಯಿ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಿುಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 42,133 ಕುಟುಂಬಗಳಿಗೆ ನರೇಗಾ ಯೋಜನೆಯ ಜಾಬ್ ಕಾರ್ಡ್​ಗಳನ್ನು ನೀಡಲಾಗಿದ್ದು, ಎಲ್ಲರಿಗೂ ಉದ್ಯೋಗ ನೀಡಬಹುದಾಗಿದೆ ಎನ್ನುತ್ತಾರೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸುನೀಲಕುಮಾರ.
ಪದವೀಧರರೂ ಕೂಲಿಗೆ: ತಾಲೂಕಿನ ಮಲಗುಂದ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕೆಲಸದಲ್ಲಿ 500ಕ್ಕೂ ಹೆಚ್ಚು ಕಾರ್ವಿುಕರು ಪಾಲ್ಗೊಂಡಿದ್ದಾರೆ. ಇವರಲ್ಲಿ ಪಿಎಚ್​ಡಿ ಪಡೆದಿರುವ ಸಿದ್ದಲಿಂಗಪ್ಪ ನಾಗಪ್ಪ ಪೂಜಾರ ಸೇರಿದಂತೆ ಐವರು ಎಂಎ, ಇಬ್ಬರು ಬಿ.ಇಡಿ ಪದವೀಧರರು, ನಾಲ್ವರು ಪದವೀಧರರು ಕೆಲಸದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. ಇದೇ ರೀತಿ ಈ ಬಾರಿ ತಾಲೂಕಿನ ಕಲ್ಲಾಪುರ, ಸೋಮಸಾಗರ, ಹೇರೂರ, ತಿಳವಳ್ಳಿ, ಶ್ಯಾಡಗುಪ್ಪಿ, ಬಾಳಂಬೀಡ ಗ್ರಾಮಗಳಲ್ಲಿ ಪದವೀಧರರು ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿ ಕಾಮಗಾರಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹ ವಿಷಯವಾಗಿದೆ.

ಬೆಂಗಳೂರು ಸೇರಿದಂತೆ ವಿವಿಧೆಡೆ ವಲಸೆ ಹೋಗಿದ್ದ ಜನರು ತಾಲೂಕಿಗೆ ಮರಳುತ್ತಿದ್ದಾರೆ. ಅವರ ನಿರುದ್ಯೋಗ ನಿವಾರಣೆಗೆ ತಕ್ಷಣವೇ ಜಾಬ್ ಕಾರ್ಡ್ ನೀಡಿ ಕೆಲಸ ನೀಡಲಾಗುತ್ತಿದೆ. ಗ್ರಾಮೀಣ ಜಲ ನಿರ್ವಹಣೆ ಹಾಗೂ ಜಲಮೂಲ ಪುನಃಶ್ಚೇತನ ಈ ವರ್ಷದ ನಮ್ಮ ಆದ್ಯತೆಯಾಗಿದೆ.| ಚನ್ನಬಸಪ್ಪ ಹಾವಣಗಿ, ಸಹಾಯಕ ನಿರ್ದೇಶಕ, ನರೇಗಾ ವಿಭಾಗ