ಜಿಲ್ಲೆ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೆ ಸಾಹಿತಿ -ಹೋರಾಟಗಾರರ ಆಗ್ರಹ

ಪಂಕಜ ಕೆ.ಎಂ.

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿರುವ ಸರ್ಕಾರದ ಕ್ರಮಕ್ಕೆ ವಿಷಾದ ವ್ಯಕ್ತಪಡಿಸಿರುವ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು, ಈ ವಿಚಾರವಾಗಿ ಕೂಡಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಮಸೂದೆಯನ್ನು ಅಂಗೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೈಸೂರಿನ ಕನ್ನಡ ಕ್ರಿಯಾ ಸಮಿತಿ, ಬೆಂಗಳೂರಿನ ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಮಸೂದೆ ಜಾರಿಗೆ ಒತ್ತಾಯಿಸಿದರು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.

ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿದ, 15 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಇಲ್ಲೇ ನೆಲೆಸಿರುವ, ಕನ್ನಡ ಓದಲು- ಬರೆಯಲು ಬಲ್ಲ ವ್ಯಕ್ತಿ ಕನ್ನಡಿಗ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ. ಹಾಗಾಗಿ ಈ ಮಸೂದೆ ಜಾರಿ ಆಗುವುದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಬೇರೆಯವರ ಉದ್ಯೋಗ ಕಸಿಯುವುದು ನಮ್ಮ ಹೋರಾಟದ ಉದ್ದೇಶವಲ್ಲ. ಕನ್ನಡದ ಅಸ್ಮಿತೆ ಉಳಿಸುವುದು ಮುಖ್ಯ ಎಂದರು.

ಉದ್ದಿಮೆದಾರರು ಬೆಂಬಲಿಸಲಿ: ಈ ಮಸೂದೆ ಕನ್ನಡಿಗರ ಬಹುದಿನಗಳ ಆಗ್ರಹವಾಗಿದೆ. ಇದಕ್ಕೆ ಉದ್ದಿಮೆದಾರರು ಬೆಂಬಲ ನೀಡಬೇಕು. ಸಾಧ್ಯವಿಲ್ಲ ಎನ್ನುವವರೊಂದಿಗೆ ಮಾತುಕತೆ ನಡೆಸಿ, ಮುಂದಿನ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಇದು ಭಾವನಾತ್ಮಕ ವಿಷಯ ಆಗಿರದೆ, ಕಾನೂನಾತ್ಮಕ ವಿಷಯ ಆಗಬೇಕು. ಸಾಂವಿಧಾನಿಕವಾಗಿ ಭಾಷಾವಾರು ರಾಜ್ಯಗಳನ್ನು ರಚಿಸಿದ ಮೇಲೆ, ಅದಕ್ಕೆ ಸಲ್ಲಬೇಕಾದ ಸವಲತ್ತುಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಮಸೂದೆ ಜಾರಿಯಾಗಬೇಕು. ಅದಕ್ಕೆ ಮೋಹನದಾಸ್ ಪೈ ಅಂತಹವರು ವಿರೋಧಿಸಿರುವುದನ್ನು ಖಂಡಿಸಿದರು.

ಕನ್ನಡ ಕ್ರಿಯಾ ಸಮಿತಿ, ಮೈಸೂರು ಸ.ರ. ಸುದರ್ಶನ ಮಾತನಾಡಿ, ಶಿಕ್ಷಣ ಅಥವಾ ಉದ್ಯೋಗ ಸಂಬಂಧ ಪಾಶ್ಚಾತ್ಯ ದೇಶಗಳಿಗೆ ತೆರಳುವವರು ಗೇಟ್, ಟಾಫಿಲ್ ಎಂಬ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಒಪ್ಪಿಕೊಳ್ಳುವ ಉದ್ಯಮಿಗಳು, ಬುದ್ಧಿಜೀವಿಗಳು ಕನ್ನಡ ಪರೀಕ್ಷೆ ನಿರಾಕರಿಸುವುದು ಗುಲಾಮಗಿರಿಯ ಮನೋಭಾವವಾಗಿದೆ ಎಂದರು.

ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಕನ್ನಡಪರ ಹೋರಾಟಗಾರರಾದ ರಾ.ನಂ. ಚಂದ್ರಶೇಖರ, ವ.ಚ. ಚನ್ನೇಗೌಡ, ಕಸಾಪ ಮಾಜಿ ಅಧ್ಯಕ್ಷ ಡಾ. ಮನು ಬಳಿಗಾರ್ ಇತರರಿದ್ದರು.