ಜಿಲ್ಲೆ

ಕನ್ನಡಿಗರಿಗೇ ಉದ್ಯೋಗ ಸತ್ಯಾಗ್ರಹಕ್ಕೆ ಕಸಾಪ ಬೆಂಬಲ

ಪಂಕಜ ಕೆ.ಎಂ.

ಬೆಂಗಳೂರು: ಕನ್ನಡ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಎಂಬ ೋಷಣೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ನೇತೃತ್ವದಲ್ಲಿ ಜು. 1ರಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬೃಹತ್ ಸತ್ಯಾಗ್ರಹಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲ ಸೂಚಿಸಿದೆ.

ಈ ಕುರಿತು ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ, ಕನ್ನಡ-ಕರ್ನಾಟಕ-ಕನ್ನಡಿಗ ವಿಚಾರಕ್ಕೆ ಸಂಬಂಧಿಸಿದ ಯಾವುದೇ ವಿಷಯವಾದರೂ ಕನ್ನಡ ಸಾಹಿತ್ಯ ಪರಿಷತ್ತು ಸ್ಪಂದಿಸುತ್ತದೆ. ಈ ಹಿಂದೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡದಲ್ಲಿಯೇ ನಾಮಫಲಕ ಅಳವಡಿಕೆ ವಿಷಯದಲ್ಲಿ ಹೋರಾಟ ನಡೆಸಿದಾಗಲೂ ಪರಿಷತ್ತು ಬೆಂಬಲ ನೀಡಿತ್ತು. ಅದೇ ರೀತಿ ಕನ್ನಡಿಗರಿಗೇ ಉದ್ಯೋಗ ವಿಚಾರದಲ್ಲೂ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎಲ್ಲಾ ಬಗೆಯ ಉದ್ಯೋಗದಲ್ಲಿಯೂ ಕನ್ನಡಿಗರಿಗೇ ಸಿಂಹಪಾಲು ಇರಬೇಕು ಎನ್ನುವುದು ನ್ಯಾಯಯುತ ಬೇಡಿಕೆ. ಡಾ.ಸರೋಜಿನಿ ಮಹಿಷಿ ವರದಿ ಕೂಡ ಇದನ್ನೇ ಹೇಳಿತ್ತು. ಅಲ್ಲದೆ ಇತ್ತೀಚೆಗೆ ಜಾರಿಯಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022ರಲ್ಲಿಯೂ ಕನ್ನಡಿಗರಿಗೇ ಉದ್ಯೋಗವೆಂಬ ಸಂಗತಿಯನ್ನು ಸ್ಪಷ್ಟವಾಗಿ ಹೇಳಲಾಗಿದೆ. ಅಪ್ರೆಂಟಿಸ್ ನಿಯಮ 1961ರ ವಿಧಿ 20ರ ಪ್ರಕಾರ ಕೂಡ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂದಿದೆ. ಆದರೆ ಜಾಗತೀಕರಣದ ಹಿನ್ನೆಲೆಯಲ್ಲಿ ಉದ್ಯೋಗಾವಕಾಶಗಳ ಸ್ವರೂಪ ಬದಲಾಗುತ್ತಿದ್ದು, ಹೊಸ ಮಾದರಿಯ ಶ್ರೇಣಿಕೃತ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಇದರಿಂದ ಸ್ಥಳೀಯರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಉದ್ಯೋಗ ದೊರೆಕುವಂತೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಉದ್ಯೋಗದಲ್ಲಿ ಮಾತ್ರವಲ್ಲದೆ ಖಾಸಗಿ ಮತ್ತು ಅತಿ ಹೆಚ್ಚಿನ ಉದ್ಯೋವಕಾಶವನ್ನು ಕಲ್ಪಿಸುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೂಡ ಕನ್ನಡಿಗರಿಗೆ ಉದ್ಯೋಗಗಳು ದೊರಕಬೇಕು. ಕನ್ನಡಿಗ ಎನ್ನಿಸಿ ಕೊಳ್ಳಲು ಹದಿನೈದು ವರ್ಷ ವಾಸವಾಗಿರ ಬೇಕು ಎನ್ನುವ ನಿಯಮದ ಜೊತೆಗೆ ಕನ್ನಡ ಓದಲು-ಬರೆಯಲು-ಸಂವಹನ ನಡೆಸಲು ಬರಬೇಕು ಎಂಬ ಅಂಶವನ್ನೂ ಸೇರಿಸ ಬೇಕು. ಇಂತಹ ಚಿಂತನ-ಮಂಥನ ನಡೆದರೆ ಅದರ ಮುಂದಾಳತ್ವವನ್ನೂ ಕನ್ನಡ ಸಾಹಿತ್ಯ ಪರಿಷತ್ತೇ ವಹಿಸಲಿದೆ ಎಂದು ತಿಳಿಸಿದ್ದಾರೆ.