ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರಿ ನೌಕರರಿಗೆ ಆಪತ್ಕಾಲದಲ್ಲಿ ಆರ್ಥಿಕ ಸಹಾಯ ಮತ್ತು ಬ್ಯಾಂಕಿನ ಸೌಲಭ್ಯಗಳನ್ನು ಉಚಿತವಾಗಿ ಪಡೆಯಲು ರಾಜ್ಯ ಸರ್ಕಾರಿ ಸಂಬಳ ಪ್ಯಾಕೇಜ್ ಖಾತೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ನೌಕರರು ಸಂಬಳ ಪ್ಯಾಕೇಜ್ ಖಾತೆ ಹೊಂದಬೇಕು. ಈ ಕುರಿತು ಆಯಾ ಇಲಾಖೆ ಜಿಲ್ಲಾ ಮುಖ್ಯಸ್ಥರು ಖಾತೆಯ ಕ್ರಮ ವಹಿಸಿ ಏಪ್ರಿಲ್ ಅಂತ್ಯದೊಳಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ ಹಾಗೂ ಸರ್ಕಾರಿ ನೌಕರರ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಬ್ಯಾಂಕರ್ಸ್ ಮತ್ತು ವಿವಿಧ ಇಲಾಖೆಗಳ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ನೌಕರರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ನೌಕರ ತನ್ನ ಸಂಬಳ ಖಾತೆಯನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಮಾಡಿಸಿದರೆ ಉಚಿತವಾಗಿ 1 ಕೋಟಿ ರೂ. ಮೊತ್ತದ ವಿಮೆ ಲಭ್ಯವಾಗುತ್ತದೆ. ಪ್ರತಿ ಇಲಾಖೆ ಬಟವಡೆ ಅಧಿಕಾರಿಗಳು ನೇರವಾಗಿ ಸಂಬಂಧಿಸಿದ ಬ್ಯಾಂಕ್ ಅಧಿಕಾರಿ ಸಂಪರ್ಕಿಸಿ ಖಾತೆ ಹೊಂದಲು, ಸಂಬಳ ಪ್ಯಾಕೇಜ್ ಖಾತೆಯಾಗಿ ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರಿಕೃತ ವ್ಯವಸ್ಥೆ ಮಾಡಲಾಗಿದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಎಂ. ಅವರು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು, ಎಸ್ಬಿಐ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಂ.ಎಸ್.ಭಟ್ಟ, ಬ್ಯಾಂಕ್ ಆಫ್ ಬರೋಡಾ ಅಧಿಕಾರಿ ಚಿನ್ನಾರಾವ್ ಮತ್ತು ಕೆನರಾ ಬ್ಯಾಂಕ್ ಅಧಿಕಾರಿ ಶಿವಾನಂದ ಎ. ಸಂಬಳ ಪ್ಯಾಕೇಜ್ ಖಾತೆ ಯೋಜನೆ ವಿವರಿಸಿದರು.
ಜಿಪಂ ಸಿಇಒ ಭುವನೇಶ ಪಾಟೀಲ, ಪಾಲಿಕೆ ಆಯುಕ್ತ ಡಾ. ರುದ್ರೇಶ ಗಾಳಿ, ಕೃಷಿ, ಕಂದಾಯ, ಆರೋಗ್ಯ, ನಗರ ಸ್ಥಳಿಯ ಸಂಸ್ಥೆಗಳು, ಪಂಚಾಯತ ರಾಜ್, ಲೋಕೋಪಯೋಗಿ, ವಿವಿಧ ಇಲಾಖೆ, ನಿಗಮ, ಮಂಡಳಿಗಳ ಅ-ಕಾರಿಗಳು ಇದ್ದರು.
ಜಿಲ್ಲಾ ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಸ್ವಾಗತಿಸಿದರು.