Employees protest against President's tyranny  
ಜಿಲ್ಲೆ

ಅಧ್ಯಕ್ಷರ ದಬ್ಬಾಳಿಕೆ ವಿರುದ್ಧ ನೌಕರರ ಪ್ರತಿಭಟನೆ

ಜಮಖಂಡಿ: ನಗರದ ಟಿಎಪಿಎಂಎಸ್ ಅಧ್ಯಕ್ಷ ಮಾನಿಂಗ ತಳವಾರ ಅವರ ದಬ್ಬಾಳಿಕೆ ಹಾಗೂ ಕಿರುಕುಳಕ್ಕೆ ಬೇಸತ್ತಿದ್ದು, ನಮಗೆ ಸಾಮೂಹಿಕವಾಗಿ ರಜೆ ನೀಡಿ ಎಂದು ಪ್ರತಿಭಟನೆ ನಡೆಸಿದ ಸಂಸ್ಥೆ ಸಿಬ್ಬಂದಿ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಎಚ್.ಕೆ ದೊಡ್ಡಸಿನ್ನವರ ಅವರಿಗೆ ಮನವಿ ನೀಡಿದರು.

ಅಧ್ಯಕ್ಷ ಅಧಿಕಾರ ದುರುಪಯೋಗಪಡಿಸಿಕೊಂಡು ಅನವಶ್ಯಕವಾಗಿ ಪ್ರತಿದಿನ ಕಿರುಕುಳ ನೀಡುವುದು, ಕಾನೂನು ಬಾಹಿರವಾಗಿ ವರ್ಗಾವಣೆ ಮಾಡುವುದು, ಹಣ ಕೊಡದೆ ಇದ್ದರೆ ನಿಮ್ಮನ್ನು ಅಮಾನತು ಮಾಡುತ್ತೇನೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

ಬೋನಸ್ ಹಣದಲ್ಲಿ ಸಿಬ್ಬಂದಿಯಿಂದ 2 ಸಾವಿರ ರೂ. ಪಡೆದಿದ್ದಾರೆ ಎಂದು ನೌಕರರು ಗಂಭೀರ ಆರೋಪ ಮಾಡಿದರು. ಆಡಳಿತ ಮಂಡಳಿಯ ನಿರ್ದೇಶಕರು ಸಿಬ್ಬಂದಿ ಜತೆ ಸೌಜನ್ಯದಿಂದ ವರ್ತಿಸುತ್ತಾರೆ. ಸಭೆಯಲ್ಲಿ ನಿರ್ದೇಶಕರ ಮಾತನ್ನು ಧಿಕ್ಕರಿಸಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ ಎಂದು ದೂರಿದರು.

ಯಾವುದೇ ತಪ್ಪು ಮಾಡದ ಸಹಾಯಕ ವ್ಯವಸ್ಥಾಪಕ ಜಿ.ಟಿ ಕಾಲತಿಪ್ಪಿ ಹಾಗೂ ಹಿರಿಯ ಸಹಾಯಕ ಆರ್.ವೈ. ವಾಜಂತ್ರಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡು ಅವರಿಗೆ 20 ಸಾವಿರ ರೂ. ವೇತನ ಕೊಡುತ್ತಿದ್ದಾರೆ. ಅಧಿಕೃತವಾಗಿ ನೇಮಕಗೊಂಡ ಸಿಬ್ಬಂದಿಗೆ ಕೇವಲ 10 ಸಾವಿರ ರೂ. ವೇತನ ನೀಡುತ್ತಿದ್ದಾರೆ ಎಂದು ಅಧ್ಯಕ್ಷರ ವಿರುದ್ಧ ಹರಿಹಾಯ್ದರು.

ಅಧ್ಯಕ್ಷರ ದುರಾಡಳಿತದಿಂದ ಸಂಘ ದಿವಾಳಿ ಅಂಚಿನಲ್ಲಿದೆ. 2024 ಮಾರ್ಚ್ ತಿಂಗಳಿನಲ್ಲಿ 13 ರಿಂದ 14 ಲಕ್ಷ ಲಾಭದಲ್ಲಿದ್ದ ಸಂಸ್ಥೆ ಇವರ ದುರಾಡಳಿತದಿಂದ ಪ್ರಸಕ್ತ ಸಾಲಿನಲ್ಲಿ ನಷ್ಟ ಅನುಭವಿಸುವಂತಾಗಿದೆ. ಸಂಘದ ಪರಿಸ್ಥಿತಿ ಬಗ್ಗೆ ಜಿಲ್ಲಾ ಉಪ ನಿಬಂಧಕರು ಹಾಗೂ ಹಿರಿಯ ಅಧಿಕಾರಿಗಳು ಹಾಗೂ ಸಹಾಯಕ ನಿಬಂಧಕರಿಗೆ ಹಲವಾರು ಬಾರಿ ಮನವಿ ಮೂಲಕ ತಿಳಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಅಧ್ಯಕ್ಷರ ದುರಾಡಳಿತ ಇದೇ ರೀತಿ ಮುಂದುವರಿದರೆ ಸಂಘದ 16 ಜನ ನೌಕರರ ಕುಟುಂಬಗಳು ಬೀದಿಗೆ ಬೀಳಲಿವೆ. ಕೂಡಲೇ ಮೇಲಧಿಕಾರಿಗಳು ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಿರ್ದೇಶಕರು ಇದರ ಬಗ್ಗೆ ಚರ್ಚಿಸಿ ಸಿಬ್ಬಂದಿ ನಿರಾತಂಕದಿಂದ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಬಿ.ಆರ್ ಹಿಪ್ಪರಗಿ, ಎಸ್.ಎ ಬಾಗೇವಾಡಿ, ಎಸ್.ವೈ ಭಗವತಿ, ಆರ್. ಎನ್ ಪೂಜಾರಿ, ಎನ್.ಎಸ್ ಕಕಮರಿ, ಎಸ್. ಎಸ್ ಮಾಳೇದ, ಎಸ್.ಎಸ್ ರಾಮಗೊಂಡ, ಬಿ.. ಹ್ಯಾಳನವರ, ಆರ್.ಕೆ. ಅಸ್ಕಿ, ಸಿದ್ದು ತವನಿದಿ, ಬಿ.ಎಚ್ ಪಾಟೀಲ, ಪಿ.ಐ. ಹಿಪ್ಪರಗಿ, ಗುರುರಾಜ ಕೊಣ್ಣೂರ, ಮಂಜು ಮಾಳೇದ ಹಾಗೂ ಅಮಾನತುಗೊಂಡಿರುವ ಸಿಬ್ಬಂದಿ ಜಿ.ಟಿ ಕಾಲತಿಪ್ಪಿ, ಆರ್.ವೈ. ವಾಜಂತ್ರಿ ಇದ್ದರು.