ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಉದ್ಯೋಗ ಮೇಳಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮರ್ಪಕ ಮಾಹಿತಿ ಪಡೆದು ಉದ್ಯೋಗ ಪಡೆದುಕೊಳ್ಳಲು ಯುವಜನರು ಮುಂದಾಗಬೇಕು. ಅವಕಾಶ ವಂಚಿತರಾಗದೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ ಹೇಳಿದರು.
ದೊಡ್ಡಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೌಶಲಾಭಿವೃಧ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮತ್ತು ಎಸ್‌ಎಪಿ ಲ್ಯಾಬ್-ಕೋಡ್ ಉನ್ನತಿ ಯೋಜನೆಯಿಂದ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಮಾತನಾಡಿದರು.
ಉತ್ತಮ ಶಿಕ್ಷಣ ಮತ್ತು ಪದವಿ ಮುಗಿಸಿದರೂ ಮಾಹಿತಿ ಕೊರತೆಯಿಂದ ಯುವಜನತೆ ಸೂಕ್ತ ಉದ್ಯೋಗ ಪಡೆಯುವಲ್ಲಿ ವಿಲರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಮೇಳಗಳು ಯುವ ಜನತೆಗೆ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ಯುವಜನತೆಗೆ ಉತ್ತಮ ಉದ್ಯೋಗ ಅವಕಾಶ ಕಲ್ಪಿಸಲು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಿಂದ ಎಸ್‌ಎಪಿ ಲ್ಯಾಬ್-ಕೋಡ್ ಉನ್ನತಿ ಯೋಜನೆಯಡಿ ಉದ್ಯೋಗ ಮೇಳ ನಡೆಸುತ್ತಿರುವುದು ಶ್ಲಾಘನೀಯ. ಇಂಥ ಉದ್ಯೋಗ ಮೇಳಗಳು ಮತ್ತಷ್ಟು ಆಯೋಜನೆಯಾಗುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಗ್ರಾಮೀಣ ಯುವಜನರಿಗೆ ಉದ್ಯೋಗ ಅವಕಾಶಗಳು ಕಲ್ಪಿಸುವುದರಿಂದ ದೇಶದ ಆರ್ಥಿಕತೆ ಮತ್ತು ಪ್ರಗತಿ ಏಕಕಾಲದಲ್ಲಿ ಸಾಧಿಸಬಹುದಾಗಿದೆ ಎಂದು ಹೇಳಿದರು.
ಉದ್ಯೋಗ ಕಲ್ಪಿಸುವ ಧ್ಯೇಯ: ವಿದ್ಯಾರ್ಥಿಗಳಲ್ಲಿ ಕೌಶಲಗಳನ್ನು ರೂಢಿಸಿ ಅವರ ಪ್ರತಿಭೆಗೆ ತಕ್ಕಂತೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಯೋಜನೆಯ ಧ್ಯೇಯವಾಗಿದೆ ಎಂದು ಕಾರ್ಯಕ್ರಮ ಆಯೋಜಕ ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸಂಯೋಜಕ ನಿಶಾಂತ್ ಚವ್ಹಾಣ್ ಹೇಳಿದರು. ಉದ್ಯೋಗ ಮೇಳದಲ್ಲಿ ಉತ್ತಮ ವೇತನ ನೀಡುವ ಕಂಪನಿಗಳು ಭಾಗವಹಿಸಿದ್ದು, ಸಂತಸ ತಂದಿದೆ ಎಲ್ಲ ಕಂಪನಿಗಳಿಗೂ ತಕ್ಷಣ ಉದ್ಯೋಗಿಗಳು ಬೇಕಿದ್ದು ಅವರೇ ತರಬೇತಿ ನೀಡಿ ಕೆಲಸ ನೀಡುವ ಗುರಿ ಹೊಂದಿದ್ದಾರೆ. ಈಗಾಗಲೇ ಕಳೆದ ಮೂರು ವರ್ಷಗಳಿಂದ ಕೋಡ್ ಉನ್ನತಿ ಯೋಜನೆ ಜಿಲ್ಲೆಯಲ್ಲಿ ಅನುಷ್ಟಾನಗೊಳ್ಳುತ್ತಿದ್ದು, ಯುವಜನರಿಗೆ ಉತ್ತಮ ಉದ್ಯೋಗಿಗಳಾಗಲು ಅವಶ್ಯವಿರುವ ಕೌಶಲ ಮತ್ತು ವೃತ್ತಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಈ ಯೋಜನೆಯಡಿ ತರಬೇತಿ ಪಡೆದ ವಿದ್ಯಾರ್ಥಿಗಳು ಉದ್ಯೋಗಮೇಳದಲ್ಲಿ ಪಾಲ್ಗೊಂಡು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುವುದರೊಂದಿಗೆ ಈ ಯೋಜನೆಯ ಆಶಯ ಯಶಸ್ವಿಯಾಗಲಿ ಎಂದರು.