ಕನಕಪುರ: ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ, ನಗರಸಭೆ ವಾಹನಗಳಿಗೆ ನೀಡುವ ಮೂಲಕ ನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗೆ ಸಹಕರಿಸಬೇಕು ಎಂದು ರಾಜ್ಯ ಸಂಪನ್ಮೂಲ ಅಧಿಕಾರಿ ಪರಶುರಾಮಯ್ಯ ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಶನ್ ಆ್ಯಂಡ್ ಅಡ್ವಟೇಸಿಂಗ್ ಹಾಗೂ ನಗರಸಭೆ ಚುನಾಯಿತ ಪ್ರತಿನಿಧಿ, ಅಧಿಕಾರಿ, ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗೆ ಶುಕ್ರವಾರ ನ ತ್ಯಾಜ್ಯ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ಕನಸು ನನಸಾಗಿಸಲು ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಮಿಷನ್ ರಾಷ್ಟ್ರೀಯ ಕಾರ್ಯಾಗಾರ ಆರಂಭಿಸಿದೆ. ಬಹಿರ್ದೆಸೆ, ನ ತ್ಯಾಜ್ಯ ನಿರ್ವಹಣೆ ಮೂಲಕ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಸ್ವಚ್ಛ ಪರಿಸರ ನಿರ್ಮಾಣ ಮಾಡುವುದು ಇದರ ಮುಖ್ಯ ಧ್ಯೇಯ. ಪೌರಕಾರ್ಮಿಕರು ದೇಶದ ಬಹುದೊಡ್ಡ ಆಸ್ತಿ. ಅವರು ಕೈಗೊಳ್ಳುವ ಸ್ವಚ್ಛತೆಯಿಂದ ಸುಂದರ ನಗರ ನಿರ್ಮಿಸಬಹುದು ಎಂದರು.
ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತ ಧನಂಜಯ್ಯ ಮಾತನಾಡಿ, ಸರ್ಕಾರ ರಾಷ್ಟ್ರೀಯ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಗರದ ಸ್ವಚ್ಛತೆ ನಿರ್ವಹಣೆ ನಮ್ಮೆಲರ ಹೊಣೆಯಾಗಿದ್ದು, ಯೋಜನೆಯ ಕಾರ್ಯಗತಕ್ಕೆ ನೌಕರರು, ಸಿಬ್ಬಂದಿಯೊಂದಿಗೆ ಸಾರ್ವಜನಿಕರೂ ನತ್ಯಾಜ್ಯ ನಿರ್ವಹಣೆಯಲ್ಲಿ ಕೈಜೋಡಿಸಬೇಕು ಎಂದರು.
ನಗರಸಭೆ ಅಧ್ಯೆ ಹೇಮಾರಾಜು ಮಾತನಾಡಿ, ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು. ತರಬೇತಿ ಕಾರ್ಯಾಗಾರದಲ್ಲಿ ಭಾಗಿಯಾಗಿರುವ ಸ್ವಚ್ಛತಾ ನೌಕರರು ಅರಿವು ಪಡೆದು ನಗರದ ಸ್ವಚ್ಛತೆಗೆ ಒತ್ತುನಿಡಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಕಿರಣ್, ಸದಸ್ಯರಾದ ಸರಳಾ, ವಿಜಯಕುಮಾರ್, ರಾಮದಾಸ್, ನಾಗರಾಜು, ವಿರೇಶ್, ಮುಕುಂದರಾವ್, ಸ್ವಪ್ಸ್ ನಿರ್ದೇಶಕ ನಾರಾಯಣ್, ನಗರಸಭೆ ಅಧಿಕಾರಿಗಳು ಹಾಗೂ ಇತರರಿದ್ದರು.
ನಗರ ನೈರ್ಮಲ್ಯ ನಿರ್ವಹಣೆಗೆ 200ಕ್ಕೂ ಹೆಚ್ಚು ಕಾರ್ಮಿಕರಿದ್ದರೂ ಕಾರ್ಯಗಾರಕ್ಕೆ ಅರ್ಧದಷ್ಟು ಮಂದಿ ಗೈರಾಗಿದ್ದು, ಸ್ವಚ್ಛತೆಯ ಆಧುನಿಕ ನಿರ್ವಹಣೆ ಬಗ್ಗೆ ತಿಳಿದುಕೊಳ್ಳುವವರ್ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಗಾರಗಳು ಆಯೋಜನೆಗೊಂಡಾಗ ಪೌರಕಾರ್ಮಿಕರು ಒಗ್ಗಟ್ಟಾಗಿ ಭಾಗವಹಿಸುವ ಮೂಲಕ ಸ್ವಚ್ಛ ನಗರ ನಿರ್ಮಾಣಕ್ಕೆ ಕೈಜೋಡಿಸಬೇಕು. | ಲಕ್ಷ್ಮೀದೇವಮ್ಮ, ನಗರಸಭೆ ಮಾಜಿ ಅಧ್ಯೆಕ್ಷೆ