ಹನೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ಧ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿದರು. ಮುಕುಂದವರ್ಮ, ಈಶ್ವರ್, ನಂಜುಂಡಸ್ವಾಮಿ, ಸಿದ್ದರಾಜು ಇತರರು ಇದ್ದರು. 
ಜಿಲ್ಲೆ

ಪಕ್ಷ ಸಂಘಟನೆಗೆ ಒತ್ತು ನೀಡಿ

ಲೋಕೇಶ್ ಮನು. ಡಿ

ಹನೂರು: ಬೂತ್ ಮಟ್ಟದಲ್ಲಿ ಸಂಘಟನೆಯಾದಾಗ ಮಾತ್ರ ಪಕ್ಷ ಸದೃಢವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಶಾಸಕ ಆರ್.ನರೇಂದ್ರ ಸಲಹೆ ನೀಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ಸಂಬಂಧ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಕ್ಷ ಸದೃಢವಾಗಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಜನಪರ ಯೋಜನೆಗಳು ಜನಮನ್ನಣೆ ಗಳಿಸಿದೆ. ಕಳೆದ ಚುನಾವಣೆಯಲ್ಲಿ ನಾನು ಸೋತಿದ್ದರೂ ಜನರೊಂದಿಗೆ ಉತ್ತಮ ಒಡನಾಟವನ್ನು ಹೊಂದುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 67 ಕೋಟಿ ರೂ. ಅನುದಾನ ನೀಡಿದೆ. 20 ಕೋಟಿ ರೂ. ವೆಚ್ಚದಲ್ಲಿ ಹಾಡಿಗಳಿಗೆ ವಿದ್ಯುತ್ ಸೌಕರ್ಯ ಒದಗಿಸಲಾಗುತ್ತಿದೆ. ರಸ್ತೆ ಅಭಿವೃದ್ಧಿಯ ಕೆಲಸಗಳಾಗುತ್ತಿವೆ. ಇನ್ನು ನನ್ನ ಅಧಿಕಾರವಧಿಯಲ್ಲಿ 215 ಸಮುದಾಯ ಭವನಗಳನ್ನು ನಿರ್ಮಿಸಿದ್ದು, ಇದರಲ್ಲಿ ನಾಲ್ಕೈದು ಭವನಗಳ ಕಾಮಗಾರಿ ಬಾಕಿ ಉಳಿದಿತ್ತು. ಈ ಬಗ್ಗೆ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ಗಮನಕ್ಕೆ ತಂದು ಅನುದಾನಕ್ಕೆ ಮನವಿ ಮಾಡಲಾಗಿತ್ತು. ಇದೀಗ ಸರ್ಕಾರದಿಂದ 2.48 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಬೆನ್ನಿಗೆ ಚೂರಿ ಹಾಕುವ ಕೆಲಸ:

ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ ಹಿಂದೆ ರೈತರಿಗೆ ಸುಮಾರು 300 ಕೋಟಿ ರೂ.ಗಿಂತ ಹೆಚ್ಚು ಸಾಲ ನೀಡಲಾಗಿತ್ತು. ಇದರಲ್ಲಿ ಮೈಸೂರಿಗೆ 250 ಕೋಟಿ ರೂ., ಚಾ.ನಗರಕ್ಕೆ 28 ಕೋಟಿ ರೂ. ನೀಡಲಾಗಿತ್ತು. ನಾನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾದ ಬಳಿಕ ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು. ಇದಕ್ಕೆ ಅಧಿಕಾರಿಗಳು ಮೈಸೂರು ಜಿಲ್ಲೆಯಿಂದ ಸಮರ್ಪಕವಾಗಿ ಸಾಲ ಮರು ಪಾವತಿಯಾಗುತ್ತಿದೆ ಎಂದು ತಿಳಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದಾಗ ಮೈಸೂರು ಜಿಲ್ಲೆಯಿಂದ ಶೇ.56 ರಷ್ಟು ಸಾಲ ಮಾತ್ರ ಮರು ಪಾವತಿಯಾಗಿದ್ದರೆ, ಚಾ.ನಗರದಿಂದ ಶೇ.96 ರಷ್ಟು ಸಾಲ ಮರು ಪಾವತಿಯಾಗಿತ್ತು. ಇದನ್ನು ಮನಗಂಡು ಚಾ.ನಗರಕ್ಕೆ ಹೆಚ್ಚಿನ ಆದ್ಯತೆ ನೀಡಿ ಎರಡೂವರೆ ವರ್ಷದ ಅವಧಿಯಲ್ಲಿ ಜಿಲ್ಲೆಗೆ 425 ಕೋಟಿ ರೂ. ಸಾಲ ಮಂಜೂರು ಮಾಡಲಾಗಿತ್ತು. ಈ ಮೂಲಕ ಜಿಲ್ಲೆಯ ಪಿಎಸಿಸಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈಗೀರುವಾಗ ನಡೆದ ಎಂಸಿಡಿಸಿಸಿ ನಿರ್ದೇಶಕರ ಚುನಾವಣೆಯಲ್ಲಿ ನಮ್ಮ ಪಕ್ಷದಲ್ಲಿದ್ದವರೇ ಪಿತೂರಿ ನಡೆಸಿ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಪಕ್ಷನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ಮಹಿಳಾ ಅಧ್ಯಕ್ಷೆ ಅತಿಯಾ ಬಾನು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ನಿರ್ದೇಶಕ ಶಾಹುಲ್ ಆಹಮ್ಮದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಉದ್ದನೂರು ಸಿದ್ದರಾಜು, ತಾಲೂಕು ಅಧ್ಯಕ್ಷ ಪಾಳ್ಯ ರಾಚಯ್ಯ, ಪಿಎಸಿಸಿ ಅಧ್ಯಕ್ಷ ಅನಿಲ್ ಮುಖಂಡರಾದ ವೆಂಕಟರಮಣನಾಯ್ಡು, ಚೇತನ್ ದೊರೆರಾಜು, ನಾಗೇಂದ್ರ ಇದ್ದರು.