ಚಾತುರ್ಮಾಸ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗದ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಯುವಕರಿಗೆ ಶ್ರೀ ಸತ್ಯಾತ್ಮ ತೀರ್ಥರು ಸಂದೇಶ ನೀಡಿದರು. ಈ ವೇಳೆ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನಟರಾಜ ಭಾಗವತ್​ ಮುಂತಾದವರಿದ್ದರು.  
ಜಿಲ್ಲೆ

ಎಲ್ಲರೂ ಉತ್ತಮ ಗುಣಕ್ಕೆ ಮಹತ್ವ ನೀಡಿ: ಸತ್ಯಾತ್ಮತೀರ್ಥ ಶ್ರೀ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಪರಸ್ತ್ರೀಯಲ್ಲಿ ಯಾರೂ ಆಸಕ್ತಿ ತೋರಬಾರದು. ಇದು ಘೋರ ಅನರ್ಥಕ್ಕೆ ಕಾರಣವಾಗುತ್ತದೆ. ಅದೇ ರೀತಿ ಸ್ತ್ರೀಯರು ಕೂಡ ಪರ ಪುರುಷನಲ್ಲಿ ಆಸಕ್ತಿ ಹೊಂದಬಾರದು. ಯಾವುದು ತನಗೆ ಯೋಗ್ಯವಲ್ಲ ಅದಕ್ಕೆ ಅಪೇಕ್ಷೆಪಡಬಾರದು. ಎಲ್ಲರೂ ಚಾರಿತ್ರಕ್ಕೆ ಮಹತ್ವ ಕೊಡಬೇಕು ಎಂದು ಉತ್ತರಾದಿ ಮಠಾ-ಧಿಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.

ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್​ ಸಭೆಯಲ್ಲಿ ಶ್ರೀಪಾದಂಗಳವರು ಶುಕ್ರವಾರ ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು. ಹೆಣ್ಣನ್ನು ಮೂರೂ ಲಿಂಗಗಳ ಮೂಲಕ ಶಬ್ದ ಪ್ರಯೋಗ ಮಾಡಿರುವುದು ಭಾರತೀಯ ಸಂಸತಿಯ ವಿಶೇಷ. ಹೆಂಡತಿ ಎಂಬ ಪದಕ್ಕೆ ಪರ್ಯಾಯವಾಗಿ ಧಾರಾಃ, ಪತ್ನೀ ಹಾಗೂ ಕಲತ್ರಂ ಎಂಬ ಮೂರು ಪದಗಳಿವೆ ಎಂದರು.
ಎಂತಹ ಆಪತ್ತುಗಳು ಜೀವನದಲ್ಲಿ ಬಂದರೂ ಅದನ್ನು ಧೈರ್ಯದಿಂದ ಎದುರಿಸುತ್ತೇನೆ ಎನ್ನುವುದಕ್ಕೆ ಧಾರಾಃ ಎಂಬ ಪುಲ್ಲಿಂಗ ಶಬ್ದ, ಗಂಡನೊಂದಿಗೆ ವಿನಯದಿಂದ ಬಾಳುತ್ತೇನೆ ಎನ್ನುವುದಕ್ಕೆ ಪತ್ನಿ ಎಂಬ ಸ್ತ್ರೀಲಿಂಗ ಶಬ್ದ, ಯಾವುದೇ ಪರಪುರುಷರು ಬಂದರೂ ಅವರ ಬಲೆಗೆ ಬೀಳದೆ ತಾನು ನಪುಂಸಕಳಂತೆ ಇರುತ್ತೇನೆ ಎನ್ನುವುದಕ್ಕೆ ಕಲತ್ರಂ ಎಂಬ ನಪುಂಸಕ ಲಿಂಗ ಶಬ್ದದ ಬಳಕೆಯಲ್ಲಿದೆ ಎಂದು ತಿಳಿಸಿದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್​, ಸಿ.ಪಿ.ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್​ ಮೊದಲಾದವರಿದ್ದರು.
ಚಂದ್ರಯಾನ ವಿಜ್ಞಾನಿಗಳಿಗೆ ಸನ್ಮಾನ: ಚಂದ್ರಯಾನ ಕೈಗೊಂಡು ಯಶಸ್ವಿಯಾದ ಭಾರತೀಯ ವಿಜ್ಞಾನಿಗಳನ್ನು ಶ್ರೀ ಸತ್ಯಾತ್ಮ ತೀರ್ಥರ 28ನೇ ಚಾತುರ್ಮಾಸ ಮಹೋತ್ಸವದಲ್ಲಿ ಸೆ.24ರ ಸಂಜೆ 7ಕ್ಕೆ ಸನ್ಮಾನಿಸಲಾಗುತ್ತಿದೆ. ಇಸ್ರೋ ಪ್ರೋಗ್ರಾಂ ಡೈರೆಕ್ಟರ್​ ವಿ.ಆರ್​. ಕಟ್ಟಿ, ಡೆಪ್ಯುಟಿ ಡೈರೆಕ್ಟರ್​ಗಳಾದ ಡಾ.ಎಂ. ರವೀಂದ್ರ, ರಂಗನಾಥ ಎಕ್ಕುಂಡಿ, ಸುಬ್ರಹ್ಮಣ್ಯ ಉಡುಪ, ಡಾ.ಜಿ.ನಾಗೇಶ್​, ಗ್ರೂಪ್​ ಡೈರೆಕ್ಟರ್​ಗಳಾದ ವೈ.ಎಲ್​. ಮಧುಸೂಧನ್​, ರಾಜೇಂದ್ರಕುಮಾರ್​, ಬಿ.ಎಸ್​.ಶ್ರೀನಿವಾಸ್​, ಜಯಸಿಂಹ, ಪ್ರಮೋದ್​ ಬೆಳಗೋಂಕರ್​, ಎಂ.ಎಸ್​.ಶ್ರೀನಿ- ಅವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಲಿದ್ದಾರೆ.