ಜಿಲ್ಲೆ

ಗುಣಾತ್ಮಕ ಶಿಕ್ಷಣಕ್ಕೆ ಇರಲಿ ಒತ್ತು

ಕೋಲಾರ ಡೆಸ್ಕ್

ತುಮಕೂರು: ಅಂಕ ಗಳಿಕೆ ಪೈಪೋಟಿ ಹುಚ್ಚು ಹಿಡಿಸದೆ, ಗುಣಾತ್ಮಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ನಿಟ್ಟಿನಲ್ಲಿ ಚಿಂತನೆ ಮಾಡಬೇಕಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಹೇಳಿದರು.

ನಗರದ ಶ್ರೀದೇವಿ ಇಂಜಿನಿಯರಿಂಗ್​ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಹೆಚ್ಚು ಅಂಕ ಪಡೆಯಬೇಕೆಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನ ಕೆಲವು ಕಾಲೇಜುಗಳಲ್ಲಿ ದಿನವಿಡೀ ಡ್ರಿಲ್​ ಮಾಡಲಾಗುತ್ತೆ. ಇದರ ಹೊರತಾಗಿ ಮಕ್ಕಳಿಗೆ ಮತ್ಯಾವ ಚಟುವಟಿಕೆಗಳಿಗೂ

ಅವಕಾಶ ಮಾಡಿಕೊಡುವುದಿಲ್ಲ. ವಿದ್ಯಾರ್ಥಿಗಳಿಗೆ ಮಾರ್ಕ್ಸ್​ ಹುಚ್ಚು ಹಿಡಿಸದೆ, ಅವರನ್ನು ಮನುಷ್ಯರನ್ನಾಗಿ ಮಾಡೋಣ ಎಂದರು.

ಕಾಲೇಜಿನ ಆಡಳಿತ ನಿರ್ವಹಣೆ ಹೊಣೆ ಹೊತ್ತಿರುವ ಪ್ರಾಂಶುಪಾಲರು ಪಾಠಪ್ರವಚನ ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳ ಮೇಲೂ ಗಮನಹರಿಸಿ ಸಮರ್ಪಕವಾಗಿ ನಿರ್ವಹಿಸಬೇಕು. ಕಾಲೇಜಿಗೆ ಉತ್ತಮ ಫಲಿತಾಂಶ ತರಿಸಬೇಕೆಂದು ನೀವೆಲ್ಲರೂ ಶ್ರಮ ಪಡುತ್ತಿರುವಿರಿ. ಆ ಫಲಿತಾಂಶ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಮೂಲಕ ಬರಲಿ. ಕಾಲೇಜಿನ ಕಲಿಕೆ, ಬೋಧಕರ ಮಾರ್ಗದರ್ಶನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಿರಬೇಕು ಎಂದು ಹೇಳಿದರು. ವಿಧಾನಪರಿಷತ್​ ಮಾಜಿ ಸದಸ್ಯ ಡಾ.ಎಂ.ಆರ್​.ಹುಲಿನಾಯ್ಕರ್​ ಮಾತನಾಡಿ, ವಿದ್ಯಾರ್ಥಿಗಳ ಇಂಜಿನಿಯರಿಂಗ್​, ವೈದ್ಯಕಿಯ ಕೋರ್ಸ್​ಗಳ ಆಯ್ಕೆ ಬಗ್ಗೆಯೇ ಕಾಲೇಜುಗಳು, ಪಾಲಕರು ಆಸಕ್ತಿವಹಿಸುತ್ತಾರೆ. ಆದರೆ, ಇತರ ಕೋರ್ಸ್​ಗಳಿಗೂ ಬೇಡಿಕೆ ಇದೆ ಎಂಬುದರ ಬಗ್ಗೆ ತಿಳಿಯಬೇಕು. ನಮ್ಮ ಮಕ್ಕಳು ಒಳ್ಳೆಯ ವಿಜ್ಞಾನಿಯಾಗಬೇಕು, ಸಮಾಜ ಕಟ್ಟುವಂತಹ ವ್ಯಕ್ತಿಗಳನ್ನು ನಿಮಾರ್ಣ ಮಾಡಬೇಕು ಎಂಬ ಚಿಂತನೆಗಳಾಗಬೇಕು. ವಿದ್ಯಾರ್ಥಿಗಳು ಯಾವ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ, ಅವರು

ಯಾವ ಕೋರ್ಸ್​ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಬೇಕು. ಶಿಕ್ಷಣದ ಮೂಲಕ ಉತ್ತಮ ಸಮಾಜ ನಿಮಾರ್ಣಕ್ಕೆ ಶ್ರಮಿಸಬೇಕು ಸಲಹೆ ಮಾಡಿದರು.

ಈ ವೇಳೆ ನಿವೃತ್ತರಾದ ಪ್ರಾಂಶುಪಾಲರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ತಾಲೂಕುವಾರು ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಶ್ರೀದೇವಿ ಟ್ರಸ್ಟ್​ನ ಮಾನವ ಸಂಪನ್ಮೂಲ ನಿರ್ದೇಶಕ ಎಂ.ಎಸ್​.ಪಾಟೀಲ್​, ಶ್ರೀದೇವಿ ಇಂಜಿನಿಯರಿಂಗ್​ ಕಾಲೇಜು ಪ್ರಾಚಾರ್ಯ ನರೇಂದ್ರ ವಿಶ್ವನಾಥ್​, ಸಂಘದ ಪ್ರಧಾನ ಕಾರ್ಯದರ್ಶಿ ಎಚ್​.ವಿ.ಚಂದ್ರಶೇಖರ ಆರಾಧ್ಯ, ಖಜಾಂಚಿ ಜಿ.ಕೃಷ್ಣಮೂರ್ತಿ, ರಾಜ್ಯ ಪ್ರತಿನಿಧಿ ಬಿ.ಜೈರಾಮ್​, ಕಾರ್ಯಾಧ್ಯೆ ಬಿ.ಪಿ.ತ್ರಿವೇಣಿ, ಚಂದ್ರಯ್ಯ ಬೆಳವಾಡಿ, ಎಸ್​.ರಾಜಕುಮಾರ್​, ಎಸ್​.ರವಿಕುಮಾರ್​, ಆರ್​.ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಎಂ.ಡಿ.ಶಿವಕುಮಾರ್​, ಜಗದೀಶ್​ ಪ್ರಸಾದ್​, ನೇ.ರಂ.ನಾಗರಾಜು, ಶಿವಣ್ಣ, ಸೋಮಸುಂದರ್​, ಪ್ರತಿಭಾ ಮತ್ತಿತರರು ಉಪಸ್ಥಿತರಿದ್ದರು.