ಮುಳಬಾಗಿಲು: ರೈತರು ಬೆಳೆದ ಮಾವಿನ ಫಸಲನ್ನು ಕಾಲಾವಧಿಗೆ ಮುನ್ನವೇ ವ್ಯಾಪಾರಿಗಳಿಗೆ ಮಾರಾಟ ಮಾಡಿ ನಷ್ಟ ಮಾಡಿಕೊಳ್ಳದೆ ನೀವೇ ನಿರ್ವಹಣೆ ಮಾಡಿ ಹೆಚ್ಚು ಲಾಭ ಪಡೆಯಬೇಕು. ಈ ಕುರಿತು ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ, ಸಹಕಾರ ಸಂಘ ರೈತರ ನೆರವಿಗೆ ನಿಲ್ಲುತ್ತದೆ ಎಂದು ಸಂಘದ ಅಧ್ಯಕ್ಷ ಹಾಗೂ ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ನಗರದ ಸೋಮೇಶ್ವರ ಪಾಳ್ಯದ ಲಕ್ಷ್ಮಮ್ಮ ಮುನಿಸ್ವಾಮಯ್ಯ ಕಲ್ಯಾಣ ಮಂಟಪದಲ್ಲಿ ಟಿಎಪಿಎಂಎಸ್ ವತಿಯಿಂದ ಜಿಲ್ಲೆಯ ರೈತರಿಗೆ ಮಾವು ಬೆಳೆಗೆ ಕೀಟನಾಶಕ ಸಿಂಪಡಣೆ ಕುರಿತು ಟಾಟಾ ರ್ಯಾಲಿಸ್ ಕಂಪನಿ ತಜ್ಞರೊಂದಿಗೆ ಶುಕ್ರವಾರ ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ರೈತರಿಗೆ ಪದೇಪದೆ ನಷ್ಟವಾದರೆ ವ್ಯವಸಾಯದಿಂದ ದೂರು ಉಳಿಯಲು ಬಯಸುತ್ತಾರೆ. ಇದರಿಂದ ಸಮಾಜಕ್ಕೆ ಭಾರಿ ಪೆಟ್ಟು ಬಿದ್ದು, ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತದೆ ಎಂಬುದನ್ನು ಮರೆಯಬಾರದು. ರೈತ ಮತ್ತು ಕೃಷಿ ಉಳಿದರೆ ಮಾತ್ರ ಸಮಾಜ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ತಾಲೂಕು ಸೊಸೈಟಿ ರೈತರ ನೆರವಿಗೆ ನಿಲ್ಲಲು ದೇಶನಿಷ್ಠ ಮತ್ತು ಇಡೀ ಸಮಾಜಕ್ಕಾಗಿ ನಿಲ್ಲುವ ಟಾಟಾ ಸಂಸ್ಥೆಯ ಉತ್ಪನ್ನಗಳನ್ನೇ ಬಳಸುವಂತೆ ಸಲಹೆ ನೀಡಿದರು. ಚಾರಿಟಬಲ್ ಟ್ರಸ್ಟ್ಗೆ ಸೇರಿದ ಟಾಟಾ ರ್ಯಾಲಿಸ್ ಸಂಸ್ಥೆ ಸರ್ಕಾರ ಮತ್ತು ಸಾರ್ವಜನಿಕರ ಸಹಭಾಗಿತ್ವ ಹೊಂದಿದೆ. ಇಡೀ ದೇಶಕ್ಕೆ ಬೆಂಬಲವಾಗಿ ನಿಲ್ಲುವ ಸ್ವದೇಶಿ ಸಂಸ್ಥೆಗಳನ್ನು ಬೆಂಬಲಿಸಿ. ಇದರಿಂದ ದೇಶದ ಅಭಿವೃದ್ಧಿಯ ಜತೆಗೆ ನಾವು ಸದೃಢರಾಗೋಣ ಎಂದರು.
ಸಂಘದ ಹಿರಿಯ ನಿರ್ದೇಶಕ ಅಲಂಗೂರು ಶಿವಣ್ಣ ಮಾತನಾಡಿ, ತಾಲೂಕು ಸೊಸೈಟಿ ಅಭಿವೃದ್ಧಿಪಡಿಸುವುದರ ಜತೆಗೆ ರೈತರ ಬಗ್ಗೆ ವಿಶೇಷ ಕಾಳಜಿಯನ್ನು ಕೊತ್ತೂರು ಜಿ.ಮಂಜುನಾಥ್ ಹೊಂದಿದ್ದಾರೆ. ಗುಣಮಟ್ಟದ ರಸ ಗೊಬ್ಬರ, ಕೀಟನಾಶಕ ರೈತರಿಗೆ ಸುಲಭ ದರದಲ್ಲಿ ಸಿಗಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಇದರಿಂದ ಇಡೀ ರೈತ ಸಮುದಾಯಕ್ಕೆ ಅನುಕೂಲವಾಗುತ್ತದೆ ಎಂದರು. ಸಂದ ಉಪಾಧ್ಯಕ್ಷೆ ನಲ್ಲೂರು ಎ.ಕವಿತಾ ನಾರಾಯಣಸ್ವಾಮಿ, ನಿರ್ದೇಶಕರಾದ ವಿ.ರಾಜಪ್ಪ, ಎಂ.ಸುಬ್ರಹ್ಮಣಿ, ಡಿ.ಆರ್.ಗೋಪಾಲಕೃಷ್ಣ, ಅನುಸೂಯಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಶಿವಶಂಕರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಆರ್.ರಾಜೇಂದ್ರಗೌಡ, ಸೊಸೈಟಿ ಮಾಜಿ ಅಧ್ಯಕ್ಷ ಬಲರಾಮಕೃಷ್ಣಪ್ಪ, ತಾಪಂ ಮಾಜಿ ಅಧ್ಯಕ್ಷೆ ತಿರುವೇಣಿಯಮ್ಮ, ಮುಖಂಡರಾದ ಸನ್ಯಾಸನಹಳ್ಳಿ ತಿಮ್ಮರಾಜು, ಕೆ.ಎಂ.ಸೊಣ್ಣೇಗೌಡ, ಮುರುಕನ ಕುಂಟೆ ಕೃಷ್ಣೇಗೌಡ, ಕೆ.ಎಂ.ವೆಂಕಟರಾಮರೆಡ್ಡಿ, ಆಂಜನೇಯರೆಡ್ಡಿ, ಕೀಲಾಗಾಣಿ ನಾರಾಯಣಪ್ಪ, ಪಿ.ಎಸ್.ರಮೇಶ್, ತಾಯಾಲೂರು ರಂಗಸ್ವಾಮಿ, ಎನ್.ರಾಜಣ್ಣ ಇತರರಿದ್ದರು.
ಸಾವಯವ ಕೃಷಿಗೆ ಉತ್ತೇಜನ
ರೈತರು ಕೃಷಿಗೆ ಗಂಜಲ, ಸಗಣಿ, ಗೊಬ್ಬರ ಬಳಕೆ ಮಾಡುವುದನ್ನು ಅಳವಡಿಸಿಕೊಳ್ಳಬೇಕು. ಹಸಿರೆಲೆ ಗೊಬ್ಬರ ಭೂಮಿಗೆ ಉಣಿಸಬೇಕು. ಅಗ ರಾಸಾಯನಿಕಮುಕ್ತ ಆಹಾರ ಧಾನ್ಯ, ಹಣ್ಣು ತರಕಾರಿ ಬೆಳೆಯಬಹುದು. ಇಳುವರಿ ಕಮ್ಮಿಯಾದರೂ ಉತ್ಕೃಷ್ಟ ಪದಾರ್ಥಗಳಿಗೆ ಬೆಲೆಯೂ ಅಧಿಕವಾಗಿರುತ್ತದೆ. ಕನಿಷ್ಠ ನಿಮಗೆ ಬೇಕಾದಷ್ಟಾದರೂ ಸಾವಯವ ಕೃಷಿ ಮಾಡಿ ಉತ್ಪಾದಿಸುವುದನ್ನು ರೂಡಿಸಿಕೊಳ್ಳಿ ಎಂದು ಕೊತ್ತೂರು ಮಂಜುನಾಥ್ ಕರೆನೀಡಿದರು.
ರೈತರಲ್ಲಿ ತಾತ್ಸಾರ ಮನೋಭಾವ ಸಲ್ಲದು
ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಎಸ್ಸಿ/ಎಸ್ಟಿ ರೈತರಿಗೆ ಉಚಿತ ಯಶಸ್ವಿ ಆರೋಗ್ಯ ವಿಮಾ ಯೋಜನೆ ಅನುಷ್ಠಾನದಲ್ಲಿದ್ದು, ಇತರೆ ಸಾಮಾನ್ಯ ವರ್ಗದ ರೈತರು 500 ರೂ. ಕಟ್ಟಿದರೆ ಆ ಕುಟುಂಬದ 5 ಸದಸ್ಯರಿಗೆ ಈ ಸೌಲಭ್ಯ ಸಿಗುತ್ತದೆ. ಆದರೆ ಕುಟುಂಬದಲ್ಲಿ 5ಕ್ಕಿಂತ ಹೆಚ್ಚು ಸದಸ್ಯರಿದ್ದರೆ, ಒಬ್ಬರಿಗೆ 100 ರೂ. ಹೆಚ್ಚುವರಿ ಶುಲ್ಕ ಪಾವತಿಸಿ ಉಚಿತ ಆರೋಗ್ಯ ವಿಮೆ ಯೋಜನೆ ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ತಾಲೂಕು ಸೊಸೈಟಿಯಲ್ಲಿ ಷೇರುದಾರರಾಗಿರುವ ಎಲ್ಲ ರೈತರಿಗೂ ಉಚಿತ ಆರೋಗ್ಯ ವಿಮೆ ಸೌಲಭ್ಯ ಸಿಗಬೇಕೆಂಬ ನೀರಿಕ್ಷೆಯಿಂದ 500 ರೂ.ಗಳನ್ನು ಸ್ವತ@ ತುಂಬಿ ಕಾರ್ಡ್ ಬಂದಿದ್ದರೂ ಅದನ್ನು ತೆಗೆದುಕೊಳ್ಳುವಲ್ಲಿ ಜನ ಉದಾಸಿನ
ತೋರಿದ್ದಾರೆ ಎಂದು ಕೊತ್ತೂರು ಬೇಸರ ವ್ಯಕ್ತಪಡಿಸಿದರು.