ಜಿಲ್ಲೆ

ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡಲಿ

ರವಿ ಎಸ್. ಬಳೂಟಗಿ

ನರಗುಂದ: ಭಾರತ ಮಾತೆಯ ಅಂತಸತ್ವ, ಜೀವಂತಿಕೆ, ತತ್ವ, ಆತ್ಮಸ್ಥೈರ್ಯ, ಮೂಲ ಆಶಯ ಯಾರೊಬ್ಬರೂ ಮುಟ್ಟಲು ಸಾಧ್ಯವಿಲ್ಲ. ಮನುಷ್ಯ ತನ್ನ ನಿತ್ಯದ ಜೀವನಕ್ಕೆ ಮಾನಸಿಕ ಹಾಗೂ ಶಾರೀರಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕಾದರೆ ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಗಾಂಧಿ ಸರ್ಕಲ್ ಟಿಎಂಸಿ ರೋಡ್ ಬಡಾವಣೆಯಲ್ಲಿರುವ ಬಚಪನ್ ಪ್ಲೇ ಸ್ಕೂಲ್ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನಾ ಸಮಾರಂಭಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣದಲ್ಲಿ ಶಕ್ತಿ ಇದೆ. ಮಕ್ಕಳು ಚಿಕ್ಕವರಿರುವಾಗಲೇ ಸಂಸ್ಕಾರ ಕಲಿಸುವ ಮೂಲಕ ಅವರನ್ನು ದೇಶದ ಸರ್ವಾಂಗೀಣ ಅಭಿವೃದ್ಧ್ದಿಗೆ ಶ್ರಮವಹಿಸಲು ಅಣಿಗೊಳಿಸಬೇಕು. ಸ್ವಾಮಿ ವಿವೇಕಾನಂದರ ದೇಶ ಭಕ್ತಿ ಮಕ್ಕಳಲ್ಲಿ ಬೆಳೆಯಬೇಕು. ಮಕ್ಕಳ ಉಜ್ವಲ ಭವಿಷ್ಯಕ್ಕೆ ಪಾಲಕರೇ ನಿರ್ಣಾಯಕರಾಗಿದ್ದು, ಅವರಲ್ಲಿ ಉತ್ತಮ ಗುಣಗಳು ಬೆಳೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಬಿಇಒ ಡಾ. ಗುರುನಾಥ ಹೂಗಾರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್‌ಕೆಜಿಯಿಂದ ಹಿಡಿದು 15 ವರ್ಷದ ವರೆಗೆ ಪ್ರತಿಯೊಬ್ಬ ಮಕ್ಕಳಿಗೆ ಒಂದೇ ಸೂರಿನಡಿ ಉಚಿತ ಶಿಕ್ಷಣ ನೀಡಲು ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಶಿಕ್ಷಕರು ತಮ್ಮ ಮೂಗಿನ ನೇರ ಶಿಕ್ಷಣ ಕೊಡಬಾರದು. ಮಗು ಏನನ್ನು ಅಪೇಕ್ಷಿಸುತ್ತದೆಯೋ ಅದೇ ಕಲಿಸಬೇಕು. ಭಾರತಕ್ಕೆ ಬುದ್ಧಿವಂತರಿಗಿಂತ ಹೃದಯವಂತರು ಬೇಕಾಗಿದ್ದಾರೆ. ಪುಸ್ತಕಗಳಿಗಿಂತ ಮಸ್ತಕದ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ಶಾಂತಲಿಂಗ ಶ್ರೀಗಳು ಮಾತನಾಡಿ, ಮಕ್ಕಳ ಮನಸು ಬಹಳ ಸೂಕ್ಷ್ಮವಾಗಿರುತ್ತದೆ. ಅವರಲ್ಲಿ ಯಾವುದೇ ಜಾತಿ, ಮತ, ಪಂಥ ಇರುವುದಿಲ್ಲ. ಹೀಗಾಗಿ ಅವರನ್ನು ಜಗ ಬೆಳಗುವ ದೀಪಗಳೆಂದು ಕರೆಯಲಾಗುತ್ತದೆ. ಶಿಕ್ಷಣ ಮಗುವಿಗೆ ಹೊರೆಯಾಗದೆ ಹಗುರವಾಗಿರಬೇಕು. ಒಂದು ದೇಶ ಸಂಪೂರ್ಣ ಅಭಿವೃದ್ಧಿ, ಸಂಸ್ಕಾರ, ಸಮೃದ್ಧಿ ಹೊಂದಬೇಕಾದರೆ ಶಿಕ್ಷಣ ಅವಶ್ಯಕ ಎಂದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಕೆ. ಗುಜಮಾಗಡಿ ಮಾತನಾಡಿದರು. ಗಣ್ಯರನ್ನು ಸನ್ಮಾನಿಸಲಾಯಿತು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪವನ ಗುಜಮಾಗಡಿ ಸ್ವಾಗತಿಸಿದರು. ಅನ್ನಪೂರ್ಣಾ ಗಡೇಕಾರ ನಿರೂಪಿಸಿದರು.