ಜಿಲ್ಲೆ

ಡಿಜಿಟಲ್ ಲೈಬ್ರರಿಯಲ್ಲಿ ಚಿಣ್ಣರ ಕಲಿಕೆಗೆ ಒತ್ತು

ಕಿರಣ್ ಗೌಡ.ಜಿ

 ಗುಂಡ್ಲುಪೇಟೆ: ತಾಲೂಕಿನ ಹುಂಡೀಪುರ ಗ್ರಾಮದಲ್ಲಿ ಆರಂಭಿಸಿರುವ ಡಿಜಿಟಲ್ ಗ್ರಂಥಾಲಯ ರಜಾ ದಿನಗಳಲ್ಲಿ ಮಕ್ಕಳು ಮತ್ತು ಯುವಕರಿಗೆ ಉಪಯುಕ್ತವಾಗುತ್ತಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಲೆಗಳಿಗೆ ರಜೆ ನೀಡಿದ್ದ ವೇಳೆ ಮನೆಗಳಲ್ಲಿ ಮಕ್ಕಳನ್ನು ನಿಭಾಯಿಸುವುದು ಪಾಲಕರಿಗೆ ದೊಡ್ಡ ತಲೆನೋವಾಗಿತ್ತು. ಬೆಳಗ್ಗೆ ಬೇಗನೆ ಏಳದೆ ಹಾಸಿಗೆಯಲ್ಲಿಯೇ ಮಲಗುವುದು, ಪಾಲಕರ ಮೊಬೈಲ್ ಹಿಡಿದು ಗೇಮ್ ಆಡುತ್ತಾ ಕಣ್ಣಿನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿಯ ದಸರೆ ರಜೆಯಲ್ಲಿ ಗ್ರಂಥಾಲಯಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಕಂಪ್ಯೂಟರ್ ಕಲಿಕೆ ಜತೆಗೆ ಪುಸ್ತಕಗಳನ್ನೂ ಓದುವ ಅಭ್ಯಾಸ ರೂಡಿಸಿಕೊಂಡಿರುವುದು ಪಾಲಕರ ಖುಷಿಗೆ ಕಾರಣವಾಗಿದೆ.

ಹುಂಡೀಪುರ ಗ್ರಾಮ ಪಂಚಾಯಿತಿಯಲ್ಲಿ ಆರಂಭಿಸಿರುವ ಡಿಜಿಟಲ್ ಗ್ರಂಥಾಲಯ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೂ ಮಕ್ಕಳು ಹಾಗೂ ವಿದ್ಯಾರ್ಥಿಗಳ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿದ ನಂತರ ಮತ್ತೆ ಗ್ರಂಥಾಲಯಕ್ಕೆ ಬರುವ ಮಕ್ಕಳು ಕಂಪ್ಯೂಟರ್‌ಗಳಲ್ಲಿ ಚಿತ್ರ ಬಿಡಿಸುವುದು. ಬಿಡಿಸಿದ ಚಿತ್ರಕ್ಕೆ ತಮ್ಮ ಕಲ್ಪನೆಗೆ ತಕ್ಕಂತೆ ಬಣ್ಣ ತುಂಬಿಸುವ ಮೂಲಕ ಬಾಲ್ಯದಿಂದಲೇ ತಮ್ಮ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಮೈಕ್ರೋಸಾಫ್ಟ್ ಫೈಲ್ ತೆರೆದು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟೈಪ್ ಮಾಡುವ ಮೂಲಕ ಕಂಪ್ಯೂಟರ್ ಕಲಿಕೆಯ ಮೂಲ ಜ್ಞಾನವನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಜತೆಗೆ ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೂ ಮಕ್ಕಳ ಜತೆ ಕುಳಿತು ಅವರ ಪ್ರತಿಭೆಗಳನ್ನು ಗಮನಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ಸದ್ಯ ಗ್ರಂಥಾಲಯದಲ್ಲಿ ಮಕ್ಕಳ ಸಾಹಿತ್ಯ, ವ್ಯಕ್ತಿ ವಿಕಸನ, ಕಥೆ, ಕಾದಂಬರಿ, ಜೀವನಚರಿತ್ರೆ, 7 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳು ಹಾಗೂ 7 ಕಂಪ್ಯೂಟರ್‌ಗಳಿವೆ. ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತ ಪುಸ್ತಕಗಳು, ದಿನಪತ್ರಿಕೆಗಳನ್ನು ತರಿಸಿ ಇಡಲಾಗುತ್ತಿದ್ದು, ಯುವ ಜನತೆಗೆ ಜ್ಞಾನಾರ್ಜನೆ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ತಾಂತ್ರಿಕ ಕಾರಣದಿಂದ ಇಂಟರ್‌ನೆಟ್ ಸಂಪರ್ಕ ಕಡಿತವಾಗಿರುವುದರಿಂದ ಆನ್‌ಲೈನ್ ಶಿಕ್ಷಣ ಪಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಚಿಕ್ಕ ಮಕ್ಕಳು ಕವನಗಳನ್ನು ಬರೆಯುವ ಮೂಲಕ ತಮ್ಮ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ ಎಂದು ಗ್ರಂಥಪಾಲಕಿ ಸುಲೋಚನಾ ತಿಳಿಸಿದ್ದಾರೆ.