ಜಿಲ್ಲೆ

ಚಾರಣ ಜಲ ಕ್ರೀಡೆಗಳ ಪ್ರವಾಸೋದ್ಯಮಕ್ಕೆ ಒತ್ತು

* ಜಿಲ್ಲೆಯಲ್ಲಿ ಇರುವ ಕಣ್ವ- ಮಂಚನಬೆಲೆಯಲ್ಲಿ ಜಲ ಕ್ರೀಡೆ

* ಹಲವು ಬೆಟ್ಟಗಳಲ್ಲಿ ಟ್ರೆಕ್ಕಿಂಗ್‌ಗೆ ವ್ಯವಸ್ಥೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಪ್ರವಾಸಿಗರನ್ನು ತನ್ನತ್ತ ಸೆಳೆಯಲು ತನ್ನೆಲ್ಲಾ ಸಾಮರ್ಥವ್ಯನ್ನು ಹೊಂದಿರುವ ಜಿಲ್ಲೆಯ ಪ್ರವಾಸೋಧ್ಯಮ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸರ್ಕಾರ ಮುಂದಾಗಿದೆ.

ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ರಾಮನಗರ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತೆ ಇದೆ. ಬೃಹತ್ ಬೆಟ್ಟಗುಡ್ಡಗಳು ಚಾರಣಕ್ಕೆ ಅವಕಾಶವನ್ನು ಹೊಂದಿದ್ದರೆ, ಜಲಾಶಯಗಳು ಜಲ ಕ್ರೀಡೆಗಳ ಮೂಲಕ ಪ್ರವಾಸೋದ್ಯಮವನ್ನು ಆಕರ್ಷಿಸುವ ಶಕ್ತಿಯನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ಪ್ರವಾಸಿ ತಾಣ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು, ಅತಿ ಶೀಘ್ರದಲ್ಲಿಯೇ ಕಣ್ವ ಜಲಾಶಯದಲ್ಲಿ ಜಲ ಕ್ರೀಡೆಗಳು ಆರಂ‘ಗೊಳ್ಳಲಿವೆ.

ಶೀಘ್ರವೇ ಆರಂಭ:

ಕಣ್ವ ಜಲಾಶಯಕ್ಕೆ ಇತ್ತೀಚಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ಹಲವು ಜನ ಪ್ರತಿನಿಧಿಗಳೊಂದಿಗೆ ಬೋಟಿಂಗ್ ನಡೆಸಿದ್ದರು. ಬೆಂಗಳೂರು - ಮೈಸೂರು ಹೆದ್ದಾರಿಗೆ ಸಂಪರ್ಕ ಹೊಂದಿರುವ ಕಣ್ವ ಜಲಾಶಯದಲ್ಲಿ ಮುರುಡೇಶ್ವರ ಮೂಲದ ಸಂಸ್ಥೆಯೊಂದು ಬೋಟಿಂಗ್ ನಡೆಸಲು 15 ವರ್ಷಗಳಿಗೆ ಟೆಂಡರ್ ಪಡೆದುಕೊಂಡಿದೆ. ಸದ್ಯಕ್ಕೆ ವಿವಿ‘ ಇಲಾಖೆಗಳ ನಿರಕ್ಷೇಪಣಾ ಪತ್ರಗಳು ಮಾತ್ರ ಬೇಕಿದ್ದು, ಇದು ಲಭ್ಯವಾಗುತ್ತಿದ್ದಂತೆ ಇಲ್ಲಿ, ಕಯಾಕಿಂಗ್, ಪಡೆಲ್ ಬೋಟಿಂಗ್, ವಾಟರ್ ಬೈಕ್ ಮತ್ತಿತರ ಜಲ ಕ್ರೀಡಾ ಚಟುವಟಿಕೆಗಳು ಆರಂಭಗೊಳ್ಳಲಿವೆ. ಇದರ ಜತೆಗೆ ಈ ಹಿಂದೆಯೇ ಮಾಗಡಿಯ ಮಂಚನಬೆಲೆ ಜಲಾಶಯದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿ ಇದೆ.

ಕೆರೆಗಳಲ್ಲೂ ಜಲ ಕ್ರೀಡೆ

ಕೇವಲ ಜಲಾಶಯಗಳಿಗೆ ಸೀಮಿತವಾಗದೆ ಜಿಲ್ಲೆಯ ಬೃಹತ್ ಕೆರೆಗಳಲ್ಲಿಯೂ ಜಲ ಕ್ರೀಡೆಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಈಗಾಗಲೇ ರಾಮನಗರ ರಂಗರಾಯರದೊಡ್ಡಿ, ಬಿಡದಿಯ ನಲ್ಲಿಗುಡ್ಡೆ ಕೆರೆಯಲ್ಲಿ ಜಲ ಕ್ರೀಡೆಗಳನ್ನು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಉಳಿದಂತೆ ಇನ್ನೂ 12 ಕೆರೆಗಳನ್ನು ಗುರುತು ಮಾಡಲಾಗಿದ್ದು, ಕೆಲವು ಕೆರೆಗಳಲ್ಲಿ ನೀರು ಇಲ್ಲದ ಕಾರಣ ಟೆಂಡರ್ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ.

ಚಾರಣಕ್ಕೆ ಯೋಜನೆ

ರಾಮನಗರ ಜಿಲ್ಲೆ ಅದರಲ್ಲೂ ಮಾಗಡಿ, ರಾಮನಗರ ಮತ್ತು ಕನಕಪುರ ತಾಲೂಕುಗಳಲ್ಲಿ ಶಿಲಾ ಬೆಟ್ಟಗಳ ಸಂಖ್ಯೆ ಹೇರಳವಾಗಿದೆ. ಈಗಾಗಲೇ ಮಾಗಡಿಯ ಸಾವನದುರ್ಗ ಬೆಟ್ಟದಲ್ಲಿ ಚಾರಣ ನಡೆಯುತ್ತಿದೆ. ಇದರ ಜತೆಗೆ ಉಳಿದ ಕಡೆಗಳಲ್ಲಿಯೂ ಅನಧಿಕೃತವಾಗಿ ಟ್ರೆಕ್ಕಿಂಗ್ ನಡೆಯುತ್ತಲೇ ಇದೆ. ಆದರೆ, ಅರಣ್ಯ ಇಲಾಖೆ ಸಹಕಾರದೊಂದಿಗೆ ಪ್ರವಾಸೋ‘್ಯಮ ಇಲಾಖೆ ರಾಮನಗರದ ಸ್ವಾಮಿ ಬೆಟ್ಟ, ರಂಗರಾಯರ ಬೆಟ್ಟ, ಕನಕಪುರದ ಅಚ್ಚಲು ಬೆಟ್ಟದಲ್ಲಿ ರಾಕ್ ಕ್ಲೆ‘ಂಬಿಂಗ್ ಮತ್ತು ಟ್ರೆಕ್ಕಿಂಗ್ ನಡೆಸಲು ಆಸಕ್ತ ಸಂಸ್ಥೆಗಳಿಂದ ಎಕ್ಸ್‌ಪ್ರೆಷನ್ ಆ್ ಇಂಟ್ರೆಸ್ಟ್ ಆಹ್ವಾನಿಸಿವೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ, ಇದಕ್ಕೆ ಶೀಘ್ರವೇ ಚಾಲನೆ ದೊರೆಯಲಿದೆ.

ಬೇಕಿದೆ ಸರ್ಕಾರದ ನೆರವು

ರಾಮನಗರ ಜಿಲ್ಲೆ ಪ್ರವಾಸೋ‘್ಯಮಕ್ಕೆ ತನ್ನನ್ನು ತೆರೆದುಕೊಂಡಿದೆ. ಆದರೆ, ಇದಕ್ಕೆ ಬೇಕಾದ ರೂಪು ರೇಷೆಗಳನ್ನು ನೀಡಿ, ಅನುದಾನ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಜಿಲ್ಲೆಯ ‘ಧಾರ್ಮಿಕ, ಪ್ರವಾಸಿ ತಾಣಗಳ ಬೇಟಿ, ಚಾರಣ ಸೇರಿ ಸಮಗ್ರವಾದ ಪ್ರವಾಸೋದ್ಯಮ ಯೋಜನೆಯನ್ನು ಜಾರಿಗೆ ತಂದರೆ ಇಲ್ಲಿಯೇ ಸಾಕಷ್ಟು ಉದ್ಯೋಗ ಸೃಷ್ಟಿ ಆಗಲಿವೆ. ಈ ಹಿಂದೆ ಟೂರಿಸಂ ಸರ್ಕೀಟ್ ಮಾಡುವ ಯೋಜನೆ ರೂಪಿಸಲಾಗಿತ್ತಾದರೂ ಇದು ಜಾರಿಗೆ ಬರಲಿಲ್ಲ. ಆದರೆ, ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ನೀಡಿದರೆ ಜಿಲ್ಲೆಯ ಅಭಿವೃದ್ಧಿಗೂ ಸಹಕಾರಿ ಆಗಲಿದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ವಾಟರ್ ಸ್ಪೋರ್ಟ್ಸ್, ರಾಕ್ ಕ್ಲೈಬಿಂಗ್ ನಂತಹ ಕ್ರೀಡೆಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾಡಳಿತ ಉತ್ಸುಕವಾಗಿ ಕೆಲಸ ಮಾಡುತಿದ್ದು, ರಾಮನಗರ ಜಿಲ್ಲೆಯನ್ನು ಪ್ರವಾಸಿ ಹಬ್ ಮಾಡಲು ಕ್ರಮವಹಿಸಲಾಗುತ್ತಿದೆ. ರವಿಕುಮಾರ್, ಸಹಾಯಕ ನಿರ್ದೇಶಕ, ಪ್ರವಾಸೋಧ್ಯಮ ಇಲಾಖೆ, ರಾಮನಗರ