ಜಿಲ್ಲೆ

ಹಿರಿಯೂರಲ್ಲಿ ಜೀವಜಲ ಸುರಕ್ಷತೆಗೆ ಒತ್ತು

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಕವಾಡಿಗರ ಹಟ್ಟಿ ಪ್ರಕರಣ ನಂತರ ಎಚ್ಚೆತ್ತಿರುವ ಸ್ಥಳೀಯ ನಗರಸಭೆ ಜೀವಜಲ ಸುರಕ್ಷತೆಗೆ ಆದ್ಯತೆ ನೀಡಿದ್ದು, ಪ್ರತಿ ಮನೆಗೆ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮ ವಹಿಸಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರು ಕೇಳಿಬಂದಿದೆ.
ಜೀವನಾಡಿ ವಿವಿ ಸಾಗರದಿಂದ ಹಿರಿಯೂರಿಗೆ ಕುಡಿವ ನೀರು ಪೂರೈಕೆಯಾಗುತ್ತಿದ್ದು, ಲಕ್ಕವ್ವನಹಳ್ಳಿ ರಸ್ತೆಯಲ್ಲಿರುವ ಜಲ ಸಂಗ್ರಹಗಾರದಲ್ಲಿ ನೀರನ್ನು ಫಿಲ್ಟರ್ ಮಾಡಿ, ಹಿರಿಯೂರಿನ 31 ವಾರ್ಡ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಜಲ ಸಂಗ್ರಹಗಾರದ ಶುಚಿತ್ವಕ್ಕೆ ಆದ್ಯತೆ ನೀಡಿದ್ದು, ಕುಡಿವ ನೀರು ಪೂರೈಕೆಗೆ ಮುನ್ನ ಅಲಂ, ಬ್ಲೀಚಿಂಗ್ ಪೌಡರ್ ಹಾಕಲಾಗುತ್ತಿದೆ. ಜಿಲ್ಲಾಡಳಿತದ ಸೂಚನೆಯಂತೆ 15 ದಿನಗಳಿಗೊಮ್ಮೆ ನೀರನ್ನು ಲ್ಯಾಬ್ ಗೆ ಕಳುಹಿಸಿ ಗುಣಮಟ್ಟ ಪರಿಶೀಲಿಸಲಾಗುತ್ತಿದೆ, ನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ.
ಹಿರಿಯೂರು ಪಟ್ಟಣದ ಜನ ಸಂಖ್ಯೆ 70 ಸಾವಿರ ದಾಟಿದ್ದು, 31 ವಾರ್ಡ್‌ಗಳಿಗೂ ಕುಡಿವ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ, 2 ದಿನಗಳಿಗೊಮ್ಮೆ ನೀರು ಕೊಡಲಾಗುತ್ತಿದೆ(12 ಎಂಎಲ್‌ಡಿ) ನಗರ ವ್ಯಾಪ್ತಿಯಲ್ಲಿ 14 ಓವರ್ ಹೆಡ್ ಟ್ಯಾಂಕ್, 03 ಶುದ್ಧ ಕುಡಿವ ನೀರಿನ ಘಟಕ ಸುಸ್ಥಿತಿಯಲ್ಲಿದ್ದು, 03 ಟೆಂಡರ್ ಹಂತದಲ್ಲಿವೆ. 134 ಕೊಳವೆ ಬಾವಿ ಇದ್ದು, 31 ವಾರ್ಡ್ ವ್ಯಾಪ್ತಿಯಲ್ಲಿ ಪೈಪ್‌ಲೈನ್ ದುರಸ್ತಿ, ಟ್ಯಾಂಕ್ ಗಳ ಶುಚಿತ್ವಕ್ಕೆ ನಗರ ಸಭೆ ಮುಂದಾಗಿದೆ.
ಗ್ರಾಮೀಣ ಭಾಗದಲ್ಲಿ ನಿರ್ಲಕ್ಷ್ಯ: ತಾಲೂಕಿನ 33 ಗ್ರಾಪಂ ವ್ಯಾಪ್ತಿಯ 265 ಹಳ್ಳಿಗಳಲ್ಲಿ 218 ಓವರ್ ಹೆಡ್ ಟ್ಯಾಂಕ್, 407 ಮಿನಿ ಟ್ಯಾಂಕ್ ಗಳಿವೆ, ಕೆಲವೆಡೆ ವರ್ಷ ಕಳೆದರೂ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ, ಕವಾಡಿಗರ ಹಟ್ಟಿ ವಿಷ ಜಲ ದುರಂತದ ನಂತರ ಕೆಲ ಗ್ರಾಪಂ. ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ ಎನ್ನಲಾಗಿದೆ.

ಸಂಜೀವಿನಿ: ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ಜನರಿಗೆ ಸಂಜೀವಿನಿಯಾಗಿದ್ದು, ತಾಲೂಕಿನಲ್ಲಿ 201 ಶುದ್ಧ ಕುಡಿವ ನೀರಿನ ಘಟಕಗಳಿವೆ, 195 ಸುಸ್ಥಿತಿಯಲ್ಲಿದ್ದು, 06 ಘಟಕಗಳನ್ನು ಏಜೆನ್ಸಿ ಯಿಂದ ಪಂಚಾಯತ್‌ಗೆ ಹ್ಯಾಂಡ್ ಓವರ್ ಮಾಡಿಲ್ಲ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇತರ ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತಿರುವ ಶುದ್ಧ ಕುಡಿವ ನೀರಿನ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ.

*ಹಿರಿಯೂರು ತಾಲೂಕಿನಲ್ಲಿ 50-60 ಘಟಕಗಳ ಬೇಡಿಕೆ ಇದೆ. ಜಲ ಜೀವನ್ ಮಿಷನ್ ಯೋಜನೆ ಆರಂಭವಾಗುತ್ತಿದ್ದು, ಪ್ರತಿ ಮನೆಗೆ ಶುದ್ಧ ಕುಡಿವ ನೀರು ಪೂರೈಕೆಯಾಗಲಿದೆ. ಹೊಸದಾಗಿ ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆಗೆ ಅನುದಾನ ಸ್ಥಗಿತಗೊಳಿಸಲಾಗಿದೆ.
ಹಿರಿಯೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ನೀರಿನ ಸ್ಯಾಂಪಲ್ ಸಂಗ್ರಹ, ಕ್ಲೋರಿನೇಷನ್‌ಗೆ ಆದ್ಯತೆ ನೀಡಿದ್ದು, ಜೀವ ಜಲ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಡಾ.ವೆಂಕಟೇಶ್, ಟಿಎಚ್‌ಒ, ಹಿರಿಯೂರು

*ಹಿರಿಯೂರಿನಲ್ಲಿ 195 ಶುದ್ಧ ಕುಡಿವ ನೀರಿನ ಘಟಕಗಳು ಸುಸ್ಥಿತಿಯಲ್ಲಿದ್ದು, ಸುರಕ್ಷತೆ-ನಿರ್ವಹಣೆಗೆ ಆದ್ಯತೆ ನೀಡಲಾಗಿದೆ. ಇನ್ನೂ 50-60 ಶುದ್ಧ ಕುಡಿವ ನೀರಿನ ಘಟಕಗಳಿಗೆ ಬೇಡಿಕೆ ಇದೆ. ಆದರೆ ಜಲ ಜೀವನ್ ಮಿಷನ್ ಕುಡಿವ ನೀರಿನ ಯೋಜನೆ ಆರಂಭವಾಗುತ್ತಿದ್ದು, ವಿವಿ ಸಾಗರದಿಂದ ನೇರವಾಗಿ ಹಳ್ಳಿಗಳಿಗೆ ಶುದ್ಧ ನೀರು ಪೂರೈಕೆಯಾಗಲಿದೆ.
ಹನುಮಂತಪ್ಪ, ಎಇಇ, ಪಿಆರ್‌ಡಿ, ಹಿರಿಯೂರು

*ಹಿರಿಯೂರಿನ 31 ವಾರ್ಡ್‌ಗಳಿಗೆ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮವಹಿಸಿದ್ದು, ಜಲಸಂಗ್ರಹಗಾರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ನೀರು ಪೂರೈಕೆಗೂ ಮುನ್ನ ಅಲಂ, ಬ್ಲೀಚಿಂಗ್ ಪೌಡರ್ ಬಳಸಲಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಜನರ ಸುರಕ್ಷತೆಗೆ ನಗರ ಸಭೆ ಸಿಬ್ಬಂದಿ 24 ಗಂಟೆ ಜಾಗೃತರಾಗಿದ್ದಾರೆ.
ಎಚ್.ಮಹಾಂತೇಶ್, ಪೌರಾಯುಕ್ತ, ನಗರಸಭೆ