ಶಿರೋಳ: ಬಸವಣ್ಣನವರ ಕಾಯಕ ತತ್ವದಡಿ ಐಟಿಐಗಳು ತರಬೇತಿ ನೀಡುತ್ತಿವೆ. ತರಬೇತಿ ಪೂರ್ಣಗೊಳಿಸಿದ ತರಬೇತುದಾರರಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸುವುದು ಉತ್ತಮ ಕೆಲಸವಾಗಿದೆ ಎಂದು ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿಗಳು ನುಡಿದರು.
ಗದಗ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಮಾದಾರ ಚನ್ನಯ್ಯ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಗುರುಬಸವ ಜನ ಕಲ್ಯಾಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಯಾಂಪಸ್ ಸಂದರ್ಶನ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಕ್ಷಣ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಹೀಗಾಗಿ ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿದೆ ಎಂದರು.
ತರಬೇತಿ ಕೇಂದ್ರದ ಪ್ರಾಚಾರ್ಯ ಬಸವರಾಜ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯಿಂದ ಪ್ರತಿವರ್ಷ ಸಂದರ್ಶನ ಏರ್ಪಡಿಸಲಾಗುತ್ತಿದ್ದು, ನಿರುದ್ಯೋಗಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು. ಸಂದರ್ಶನಕ್ಕೆ ಹಾಜರಾಗಿದ್ದ 80 ಅಭ್ಯರ್ಥಿಗಳಲ್ಲಿ 70 ಮಂದಿ ವಿವಿಧ ಕಂಪನಿಗೆ ಆಯ್ಕೆಗೊಂಡರು. 35 ಆಕಾಂಕ್ಷಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶಪತ್ರ ನೀಡಲಾಯಿತು. ನರಗುಂದ ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಲಾಲಸಾಬ್ ಅರಗಂಜಿ, ಮಹಾಲಿಂಗಯ್ಯ ದೊಡಮನಿ, ಗುರುಬಸಪ್ಪ ಶೆಲ್ಲಿಕೇರಿ, ಈರಯ್ಯ ಮಠದ, ದ್ಯಾಮಣ್ಣ ಕಾಡಪ್ಪನವರ, ಹನುಮಂತ ಕಾಡಪ್ಪನವರ, ಶಿವಶರಣಗೌಡ ತಿರಕನಗೌಡ್ರ, ಎಸ್.ವಿ. ವಸ್ತ್ರದ, ಐ.ಎಸ್. ಸೋನಾರ, ಕಿರಿಯ ತರಬೇತಿ ಅಧಿಕಾರಿಗಳಾದ ಭೂಪತಿರಾಜ ಧೋತರದ ಹಾಜರಿದ್ದರು. ಪ್ಲೇಸ್‌ಮೆಂಟ್ ಅಧಿಕಾರಿ ಎಸ್.ವಿ. ಕುಪ್ಪಸ್ತ ನಿರೂಪಿಸಿದರು. ಎಂ.ಎಸ್. ಸಂಗಳದ ವಂದಿಸಿದರು.