ಜಿಲ್ಲೆ

ಸಂಶೋಧನೆ ಆಧಾರಿತ ಶಿಕ್ಷಣಕ್ಕೆ ಒತ್ತು

ತುಮಕೂರು ಡೆಸ್ಕ್

ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿಕೆ

ವಿಜಯವಾಣಿ ಸುದ್ದಿಜಾಲ ತುಮಕೂರು
ವಿಶ್ವದ ಶೇ.2 ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ತುಮಕೂರು ವಿವಿಯ ನಾಲ್ವರು ಪ್ರಾಧ್ಯಾಪಕರನ್ನು ಶನಿವಾರ ನಡೆದ ವಿಶ್ವ ವಿದ್ಯಾಲಯದ ಸಿಂಡಿಕೇಟ್​ ಸಭೆಯಲ್ಲಿ ಗೌರವಿಸಲಾಯಿತು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್​.ನಾಗಭೂಷಣ, ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಕೆ.ಎಸ್​.ಗಿರೀಶ್​, ಗಣಿತಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ.ಚಂದ್ರಾಲಿ ಬೈಶ್ಯ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಸುರೇಶ್​ ಅವರನ್ನು ಅಭಿನಂದಿಸಲಾಯಿತು. ಅಮೆರಿಕದ ಸ್ಟಾನ್​ ಫೋರ್ಡ್​ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಜಾಗತಿಕ ಪಟ್ಟಿಯಲ್ಲಿ ಈ ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.


ಪ್ರಾಧ್ಯಾಪಕರನ್ನು ಅಭಿನಂದಿಸಿ ಮಾತನಾಡಿದ ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಬಿದರೆಕಟ್ಟೆಯಲ್ಲಿರುವ ವಿವಿಯ ಹೊಸ ಕ್ಯಾಂಪಸ್​ನಲ್ಲಿ ಸುಸಜ್ಜಿತ ಸಂಶೋಧನಾ ಕೇಂದ್ರ ಆರಂಭಿಸಲಾಗುತ್ತಿದೆ. ಸಂಶೋಧನ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಪ್ರಾಧ್ಯಾಪಕರನ್ನು ಪ್ರೇರೇಪಿಸಲು ಸಂಶೋಧನೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.


ಕುಲಸಚಿವೆ ನಾಹಿದಾ ಜಮ್​ ಜಮ್​ ಮಾತನಾಡಿ, ಪ್ರಾಧ್ಯಾಪಕರ ಈ ಸಾಧನೆಗೆ ತುಮಕೂರು ವಿವಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ವಿವಿಯ ವಿದ್ಯಾರ್ಥಿಗಳೂ ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿದರೆ ವಿಶ್ವವಿದ್ಯಾಲಯದ ಘನತೆ ವೃದ್ಧಿಯಾಗಲಿದೆ ಎಂದರು.


ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್​, ವಿಜ್ಞಾನ ನಿಕಾಯದ ಡೀನ್​ ಪ್ರೊ. ಮನೋಹರ್​ ಶಿಂಧೆ, ಕಲಾ ನಿಕಾಯದ ಡೀನ್​ ಪ್ರೊ. ಎಂ.ಕೊಟ್ರೇಶ್​, ವಿವಿಯ ಸಿಂಡಿಕೇಟ್​ ಸದಸ್ಯರಾದ ಡಾ. ರಾಜೀವಲೋಚನ, ಕೆ.ಆರ್​.ದೇವರಾಜು, ಎಚ್​.ಬಿ.ಕುಮಾರಸ್ವಾಮಿ, ಪ್ರೊ.ಡಿ.ಆರ್​. ರೇವಣ ಸಿದ್ದೇಶ್ವರ, ಡಾ. ಚಿತ್ತರಂಜನ್​ ರೈ ಉಪಸ್ಥಿತರಿದ್ದರು.

ವಿವಿಧ ಮಾನದಂಡ: ಸಂಶೋಧನ ಪ್ರಕಟಣೆಗಳು, ಉಲ್ಲೇಖಗಳು, ಸಹ-ಲೇಖಕ ಸಂಶೋಧನ ಪ್ರಕಟಣೆಗಳು ಮತ್ತು ಎಚ್​-ಇಂಡೆಕ್ಸ್​ಗಳು ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿದ ನಂತರ ವಿಶ್ವದ ಶೇ.2 ಅಗ್ರ ವಿಜ್ಞಾನಿಗಳ ಪಟ್ಟಿಯನ್ನು ಸ್ಟಾ$ನ್​ಫೋರ್ಡ್​ ವಿಶ್ವವಿದ್ಯಾಲಯವು ಬಿಡುಗಡೆ ಮಾಡಿದೆ. ಜಾಗತಿಕ ಮಟ್ಟದಲ್ಲಿ ಸಿದ್ಧಪಡಿಸಲಾದ ಸ್ಟಾನ್​ಫೋರ್ಡ್​ ವಿಶ್ವವಿದ್ಯಾಲಯದ ಪಟ್ಟಿಯು ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಮತ್ತು 174 ಉಪಕ್ಷೇತ್ರಗಳಾಗಿ ವರ್ಗೀಕರಿಸುತ್ತದೆ. ವಿಶ್ವದ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ತಮ್ಮ ಸಂಶೋಧನ ಸಾಧನೆಗಳ ಆಧಾರದಲ್ಲಿ ಇದರಲ್ಲಿ ಗುರುತಿಸಿಕೊಳ್ಳುತ್ತಾರೆ.