ಮೈಸೂರು: ನಾವೀನ್ಯತೆ ಮತ್ತು ಸಹಭಾಗಿತ್ವ ಒಟ್ಟಾಗಿ ಹೋದರಷ್ಟೇ ಉದ್ಯಮವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯಬಹುದು ಎಂದು ಇಂಡಿಯಾ ಲೀಡರ್ ಕಮಿನ್ಸ್ ಮೆರಿಟರ್ ಅಧ್ಯಕ್ಷ ಹಾಗೂ ಸಿಒಒ ಡಾ.ಎನ್. ಮುತ್ತುಕುಮಾರ್ ಅಭಿಪ್ರಾಯಪಟ್ಟರು.
ಎಂಪ್ಲಾಯಿ ಫೆಡರೇಷನ್ ಆಫ್ ಸದರ್ನ್ ಇಂಡಿಯಾ (ಇಎಫ್‌ಎಸ್‌ಐ)ದಿಂದ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಎಸ್‌ಡಿಎಂಐಎಂಡಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಎಚ್‌ಆರ್ ಸಮ್ಮೇಳನ’ದಲ್ಲಿ ಮಾತನಾಡಿದರು.
ದೇಶದ ಭವಿಷ್ಯ ಯುವಪೀಳಿಗೆಗೆ ಶಿಕ್ಷಣ ಮತ್ತು ಮೌಲ್ಯಗಳನ್ನು ತುಂಬುವಲ್ಲಿ ಅಡಗಿದೆ. ಯಾವುದೇ ಉತ್ಪಾದನಾ ಕೈಗಾರಿಕೆಗಳು ಯಶಸ್ವಿಯಾಗಬೇಕಾದರೆ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಇಸ್ರೋ ಉಪಗ್ರಹ ಕೇಂದ್ರದ ಮಾಜಿ ನಿರ್ದೇಶಕ ಮೈಲಸ್ವಾಮಿ ಮದುರೈ ಮಾತನಾಡಿ, ನಾವೀನ್ಯತೆ ಇಂದಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ನಾವೀನ್ಯತೆ ಗಳಿಸುವುದು ಮಹತ್ವದ್ದಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿದ ಚಂದ್ರಯಾನ-1 ಮಹಾತ್ವಾಕಾಂಕ್ಷೆ ಯೋಜನೆ ಆಗಿತ್ತು. ಚಂದ್ರನ ಅಂಗಳದಲ್ಲಿ ಭಾರತದ ಮೊದಲ ಮಷಿನ್ ಕಳುಹಿಸುವಾಗ ಸಮಪರ್ಣಾ ಭಾವ ಹಾಗೂ ಪರಿಶ್ರಮ, ಬದ್ಧತೆಯಿಂದ ಕೆಲಸ ಮಾಡಿದ ಸಂಗತಿಯನ್ನು ವಿವರಿಸಿದರು.
ಇಎಫ್‌ಎಸ್‌ಐ ಪ್ರಧಾನ ಕಾರ್ಯದರ್ಶಿ ಕೆ.ಮಾಣಿಕ್ಕಂ ಮಾತನಾಡಿ, ಇಂದಿನವರೆಗಿನ ಸಂಸ್ಥೆಯ ವಿಕಾಸದ ಕುರಿತು ಸಮಗ್ರ ಮಾಹಿತಿ ನೀಡಿದರು. ಮೈಸೂರಿನ ಎಸ್‌ಡಿಎಂಐಎಂಡಿ ನಿರ್ದೇಶಕ ಡಾ.(ಲೆಫ್ಟಿನೆಂಟ್ ಕರ್ನಲ್) ಎಸ್.ಎನ್. ಪ್ರಸಾದ್ ಅವರು ಹೊಸ ಅವಕಾಶಗಳ ಸೃಷ್ಟಿ ಮತ್ತು ಉಳಿವಿಗಾಗಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು.
ಇಎಫ್‌ಎಸ್‌ಐನ ಉಪಾಧ್ಯಕ್ಷ ತ್ಯಾಗು ವಲ್ಲಿಯಪ್ಪ ಅವರು ಮಾನವ ಸಂಪನ್ಮೂಲ ವಿಭಾಗವು ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳಬೇಕೆಂಬ ಅಂಶಗಳ ಮೇಲೆ ಬೆಳಕು ಚೆಲ್ಲಿದರು.
ಈ ಸಮ್ಮೇಳನವು ಶಿಕ್ಷಣ, ನಾವೀನ್ಯತೆ ಮತ್ತು ಪ್ರಸ್ತುತ ಜಾಗತಿಕ ಉದ್ಯಮಗಳು ಎದುರಿಸುತ್ತಿರುವ ಸವಾಲುಗಳ ಕುರಿತು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳಲು ವಿವಿಧ ನಾಯಕರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು.