ಟೇಕಲ್: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮೂಲ ಸವಲತ್ತುಗಳನ್ನು ಒದಗಿಸುವ ಮೂಲಕ ಮೇಲ್ದರ್ಜೆಗೇರಿಸಿ
ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.
ಮಾಲೂರು ತಾಲೂಕು ಕೊಮ್ಮನಹಳ್ಳಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ತೊರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ನಿಮಾರ್ಣ ಮಾಡಲು ಶಾಸಕರ ಅನುದಾನದಲ್ಲಿ ಹಣ ಬಿಡುಗಡೆ ಮಾಡಲಾಗಿತ್ತು. ಕಟ್ಟಡ ಕಟ್ಟಲು ಹೋದಾಗ ಸ್ಥಳಿಯರೊಬ್ಬರು ನ್ಯಾಯಾಲಯಕ್ಕೆ ಹೋದ ಕಾರಣ ಶಾಲೆಯನ್ನು ಸಮುದಾಯ ಭವನದಲ್ಲೇ ಮುಂದುವರೆಸಬೇಕಾಯಿತು. ನಂತರ ಈ ವಿಚಾರ ಗಮನಕ್ಕೆ ಬಂದ ಕೂಡಲೇ ಬಿಇಒಗೆ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದ್ದೆ, ಆದಷ್ಟು ಬೇಗ ಗ್ರಾಮಕ್ಕೆ ಭೇಟಿ ನೀಡಿ ಮತ್ತೆ ಶಾಲೆ ಮೊದಲಿನಂತೆ ಪ್ರಾರಂಭಿಸಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥ ಮಾಡಿಸಿ ಕೊಡಿಸಲಾಗುವುದು.
ಸಿಎಂ ಅವರು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಮಧ್ಯಾಹ್ನ ಬಿಸಿಯೂಟ, ಮಕ್ಕಳಿಗೆ ಬೇಕಾಗಿರುವ ಶೂ ಭಾಗ್ಯ, ಪಠ್ಯ ಪುಸ್ತಕ, ಬಟ್ಟೆ ಹಾಗೂ ಅನೇಕ ಸವಲತ್ತುಗಳನ್ನು ಅನುಷ್ಠಾನಗೊಳಿಸಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ಎಂದರು.
ಮಾಲೂರು ತಾಲೂಕು ಟೇಕಲ್ ಹೋಬಳಿಯ ಕೊಮ್ಮನಹಳ್ಳಿ ನಿವಾಸದ ಬಳಿ ಪತ್ರಕರ್ತರೊಂದಿಗೆ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ಕೃಷಿಕ ಸಮಾಜದ ಅಧ್ಯಕ್ಷ ಆನೆಪುರ ಹನುಮಂತಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್, ಕೋಟೆ ಮುನಿರಾಜ್ ಇದ್ದರು.