ಜಿಲ್ಲೆ

ಶಾಶ್ವತ ಯೋಜನೆಗಳಿಗೆ ಒತ್ತು

ಬೆಂಗಳೂರು ಗ್ರಾಮಾಂತರ ಡೆಸ್ಕ್

ದೊಡ್ಡಬಳ್ಳಾಪುರ: ಬೆಂಗಳೂರಿಗೆ ಪರ್ಯಾಯವಾಗಿ ಅಭಿವೃದ್ಧಿಯಾಗುತ್ತಿರುವ ದೊಡ್ಡಬಳ್ಳಾಪುರ ತಾಲೂಕಿಗೆ ಶಾಶ್ವತ ಯೋಜನೆಗಳನ್ನು ರೂಪಿಸಲು ಆದ್ಯತೆ ನೀಡಲಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ನಗರದ ಶಾಸಕರ ಗೃಹ ಕಚೇರಿ ಬಳಿ ಬುಧವಾರ ಹಮ್ಮಿಕೊಂಡಿದ್ದ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ 2025ರಲ್ಲಿ ಸಾಕಷ್ಟು ಯೋಜನೆಗಳ ಜತೆಗೆ ನೀಲಿನಕ್ಷೆ ತಯಾರಿಸಿಕೊಂಡಿದ್ದೇನೆ. ಶಿಕ್ಷಣ, ಆರೋಗ್ಯ ಸೇರಿ ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ದೊಡ್ಡಬಳ್ಳಾಪುರ ನಗರಕ್ಕೆ ಔಟರ್ ರಿಂಗ್ ರೋಡ್ ನಿರ್ಮಿಸಲು ನೀಲಿನಕ್ಷೆ, ಮೂಲ ಸೌಕರ್ಯಗಳಲ್ಲಿ ಒಂದಾಗಿರುವ ನಿವೇಶನ/ಮನೆ ಹಂಚಿಕೆ ಮಾಡಲು ತೀರ್ಮಾನಿಸಿದ್ದು, ಈ ಹಿಂದೆ 2004ರಲ್ಲಿ ನಗರಸಭೆಗೆ ರೂ.5000 ಶುಲ್ಕ ಕಟ್ಟಿರುವ ವಸತಿಹೀನರಿಗೆ ಆದ್ಯತೆ ನೀಡಿ 1500 ಮಂದಿಗೆ ಹಂಚಿಕೆ ಮಾಡಲು ಸಿದ್ಧತೆ ನಡೆಸಿದ್ದೇನೆ ಎಂದರು.

ತಾಲೂಕಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ನರ್ಸಿಂಗ್ ಕಾಲೇಜು ಮಂಜೂರು ಮಾಡಿಸಲಾಗುವುದು. ಜತೆಗೆ ಮಧುರೆ ಹೋಬಳಿಯ ಸಿ.ಡಿ.ಅಗ್ರಹಾರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಿಸಲು ಜಮೀನು ಗುರುತಿಸಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ನೂತನ ಆಡಿಟೋರಿಯಂ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ತಾಲೂಕಿಗೆ ಅವಶ್ಯವಾಗಿರುವ ಮಾಲಿನ್ಯ ನಿಯಂತ್ರಣ ಕಚೇರಿಯನ್ನು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು 4.98 ಕೋಟಿ ರೂ. ಅನುದಾನಕ್ಕೆ ಗ್ರೀನ್ ಸಿಗ್ನಲ್ ದೊರಕಿದ್ದು, ಶೀಘ್ರ ಕಾಮಗಾರಿ ಆರಂಭ ಮಾಡಲಾಗುವುದು ಎಂದು ವಿವರಿಸಿದರು.

ನೂತನ ಆಡಳಿತ ಸೌಧ ನಿರ್ಮಿಸಲು ಪ್ಲ್ಯಾನ್

ಕಿಷ್ಕಿಂಧೆೆಯಂತಾಗಿರುವ ತಾಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಮತ್ತು ಉಪನೋಂದಣಾಧಿಕಾರಿ ಕಚೇರಿಗಳ ನೂತನ ಆಡಳಿತ ಸೌಧ ನಿರ್ಮಿಸಲು ಪ್ಲ್ಯಾನ್‌ಗೆ ಅನುಮೋದನೆ ಆಗಿದ್ದು, ಡಿ.ಕ್ರಾಸ್ ಬಳಿ ಜಮೀನು ಕೂಡ ಮೀಸಲಿಡಲಾಗಿದೆ ಎಂದು ಶಾಸಕರು ತಿಳಿಸಿದರು.

ಕ್ರೀಡಾಪಟುಗಳ ಅನುಕೂಲಕ್ಕಾಗಿ ಆದಿನಾರಾಯಣ ಹೊಸಹಳ್ಳಿ ಬಳಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಭೂಮಿ ಪೂಜೆ ಮಾಡಲಾಗಿದ್ದು, ಈ ವರ್ಷ ಪೂರ್ಣಗೊಳಿಸುವ ಗುರಿ ಹೊಂದಿದ್ದೇನೆ. ತಾಲೂಕಿನ ಸಾಸಲು ಹೋಬಳಿಗೆ ಮುರಾರ್ಜಿ ವಸತಿ ಶಾಲೆ, ಪಿಯು ಕಾಲೇಜು, ಹೊಸಹಳ್ಳಿ ಮತ್ತು ಹುಲಿಕುಂಟೆ ಸರ್ಕಾರಿ ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಾಡು ಮಾಡಲು ಕ್ರಮ ವಹಿಸಲಾಗಿದೆ. ತೇರಿನ ಬೀದಿ ಬಳಿಯ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು ಮತ್ತು. 2.5 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ 10 ಭಾಗಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು.

ಇಎಸ್‌ಐ ಆಸ್ಪತ್ರೆ ಈ ವರ್ಷ ಉದ್ಘಾಟನೆ

ಹಲವು ವರ್ಷಗಳಿಂದ ಹಗ್ಗಜಗ್ಗಾಟದಿಂದ ನಡೆಯುತ್ತಿರುವ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಿ ಕಾಮಗಾರಿ ಆರಂಭಿಸಲು ಶ್ರಮಿಸಲಾಗುತ್ತಿದೆ. ದೊಡ್ಡಬೆಳವಂಗಲದಲ್ಲಿ ಟ್ರಾಮಾ ಸೆಂಟರ್ ನಿರ್ಮಿಸಲು ಸಿದ್ಧತೆ ನಡೆದಿದೆ. ಲೋಕಾರ್ಪಣೆ ಆಗದೆ ಉಳಿದಿರುವ ಇಎಎಸ್‌ಐ ಆಸ್ಪತ್ರೆ ಉದ್ಘಾಟನೆಯನ್ನು ಕೇಂದ್ರ ಆರೋಗ್ಯ ಸಚಿವ, ಕಾರ್ಮಿಕ ಸಚಿವರ ಗಮನಕ್ಕೆ ತಂದು ಈ ವರ್ಷ ಲೋಕಾರ್ಪಣೆಗೆ ಯೋಜನೆ ರೂಪಿಸಲಾಗುವುದು, ದೊಡ್ಡಬಳ್ಳಾಪುರದ ಮೂಲಕ ಹಾದುಹೋಗಿರುವ ಎಸ್ಟಿಆರ್‌ಆರ್ ರಸ್ತೆಯಲ್ಲಿ ಬಾಶೆಟ್ಟಿಹಳ್ಳಿ ಸಮೀಪ ಚೇಂಜ್ ಆಫ್ ಸ್ಕೂಪ್‌ನಲ್ಲಿ ರ‌್ಯಾಂಪ್ ನಿರ್ಮಾಣ ಮಾಡಲಾಗುವುದು. ತಾಲೂಕಿನಲ್ಲಿರುವ ಎಲ್ಲ ವಾಟರ್ ಫಿಲ್ಟರ್‌ಗಳನ್ನು ನವೀಕರಣಗೊಳಿಸಿ, ಕೆಟ್ಟು ನಿಂತರೆ ಕೇವಲ 4 ಗಂಟೆಯಲ್ಲಿ ಸರಿಪಡಿಸಬೇಕು. ಗರಿಷ್ಠ 24 ಗಂಟೆಯಲ್ಲಿ ಸುವ್ಯವಸ್ಥೆಗೆ ತರುವ ಯೋಜನೆ ಜಾರಿ ಮಾಡಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ವಿವಿಧ ಸಾಮಾಜಿಕ ಚಟುವಟಿಕೆ

ಶಾಸಕ ಧೀರಜ್ ಮುನಿರಾಜು ಜನ್ಮದಿನದ ಪ್ರಯುಕ್ತ ನಗರ ಯುವ ಮೋರ್ಚಾ ಘಟಕದಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ತೇರಿನ ಬೀದಿಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಬಳಿಕ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ ವತಿಯಿಂದ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.