ಶಿವಮೊಗ್ಗ: ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ಎಐಸಿಸಿಯಿಂದಲೇ ನೇಮಕವಾದ ಪ್ರಚಾರ ಸಮಿತಿ ಕೆಲಸ ಮಾಡುತ್ತಿದೆ. ಅನೇಕ ಯುವಕರು ಕಾಂಗ್ರೆಸ್ ಸಿದ್ಧಾಂತದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಯುವಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಪಕ್ಷವನ್ನು ಸಿದ್ಧಾಂತದ ಮೇಲೆ ಸಂಘಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ಕಾರ್ಯಕರ್ತರು ಕೇವಲ ಚುನಾವಣೆಗಷ್ಟೇ ಎಂಬ ಅಭಿಪ್ರಾಯವಿದೆ. ಅದನ್ನು ಹೋಗಲಾಡಿಸಲು ಕಾಂಗ್ರೆಸ್ ಸಿದ್ಧಾಂತವನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕಾರ್ಯಾಗಾರ ನಡೆಸಲಾಗುವುದು. ಆ ಮೂಲಕ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮತ್ತು ಪ್ರಚಾರ ಮಾಡಲು ಕಾರ್ಯಕರ್ತರನ್ನು ನಿಯೋಜಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಾದ್ಯಂತ ಪಕ್ಷವನ್ನು ಸದೃಢಗೊಳಿಸಲು ಮೊದಲ ಹಂತದಲ್ಲಿ 17 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ. ಎರಡನೇ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಆರಂಭಿಸಲಾಗಿದೆ. ಚುನಾವಣೆ ಎದುರಿಸಲು ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸಬೇಕಾಗಿದೆ. ಪಕ್ಷದಲ್ಲಿ ಸೈನ್ಯಾಧಿಕಾರಿಗಳಿದ್ದರೆ ಸಾಲದು. ಸೈನಿಕರೂ ಬೇಕು. ಪಕ್ಷಕ್ಕಾಗಿ ದುಡಿದ ಸೈನಿಕರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಹಾಗಾಗಿ ಅವರನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದರು.
ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್, ಜಿಲ್ಲಾಧ್ಯಕ್ಷ ಬಿ.ಎ.ರಮೇಶ್ ಹೆಗಡೆ, ವೀಕ್ಷಕ ಅನಂತ್, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ಪ್ರಧಾನ ಕಾರ್ಯದರ್ಶಿ ಎಸ್.ಟಿ.ಹಾಲಪ್ಪ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಪ್ರಮುಖರಾದ ಇಸ್ಮಾಯಿಲ್ ಖಾನ್, ಕಲಗೋಡು ರತ್ನಾಕರ್, ಮುಡಬ ರಾಘವೇಂದ್ರ, ಶಿವಾನಂದ, ಹರ್ಷಿತ್ ಗೌಡ, ಇಕ್ಕೇರಿ ರಮೇಶ್ ಇತರರಿದ್ದರು.
ಮುಖಂಡರು, ಕಾರ್ಯಕರ್ತರ ಸಭೆ
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಿನಯ್‌ಕುಮಾರ್ ಸೊರಕೆ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಪಕ್ಷವನ್ನು ಬೇರು ಮಟ್ಟದಿಂದ ಸದೃಢಗೊಳಿಸಲು ಆಗಬೇಕಿರುವ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿದರು. ಜಿಪಂ ಮತ್ತು ತಾಪಂ ಚುನಾವಣೆಗಳು ಎದುರಾಗಲಿವೆ. ಹಾಗಾಗಿ ಈಗಿನಿಂದಲೇ ಪಕ್ಷವನ್ನು ಬಲಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.