ಜಿಲ್ಲೆ

ನೌಕರರ ಆರೋಗ್ಯ ಸುರಕ್ಷತೆಗೆ ಒತ್ತು

ವೇಮಗಲ್​: ಕುರುಗಲ್​ ಪಟ್ಟಣ ಪಂಚಾಯಿತಿ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬ್ಯಾಪ್ಟಿಸ್​ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ವೇಮಗಲ್​ನಲ್ಲಿ ಪೌರಕಾರ್ಮಿಕರಿಗೆ, ಜಲಗಾರರಿಗೆ ಅಂಗವಿಕಲ ಮಕ್ಕಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಎಪಟೈಸ್​ -ಬಿ 3ನೇ ಡೋಸ್​ ವ್ಯಾಕ್ಸಿನೇಷನ್​ ನೀಡಲಾಯಿತು.

ವೇಮಗಲ್​ -ಕುರುಗಲ್​ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್​.ಎಂ.ವೆಂಕಟೇಶ್​ ಮಾತನಾಡಿ, ನಗರದ ಸ್ವಾರಸ್ಯ ಕಾಪಾಡುತ್ತ ಸಾರ್ವಜನಿಕರಿಗೆ ಸ್ವಚ್ಛತೆ, ನೀರು ಹಾಗೂ ಬೀದಿದೀಪ ಸೇರಿ ಹಲವು ಸೌಕರ್ಯಗಳನ್ನು ಪಟ್ಟಣ ಪಂಚಾಯಿತಿಯ ಬೆನ್ನೆಲುಬಾಗಿ ನಿಂತ ಪೌರಕಾರ್ಮಿಕರು, ಜಲಗಾರರು ಹಾಗೂ ಎಲೆಕ್ಟ್ರಿಷಿಯನ್​ಗಳು ಮತ್ತು ಅವರ ಕುಟುಂಬದವರ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ವಿಕಲಾಂಗ (0&9) ಮಕ್ಕಳಿಗೆ ತಜ್ಞರಿಂದ ವಿಶೇಷ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಕಣ್ಣಿನ ಸಮಸ್ಯೆ ಇರುವ ಮಕ್ಕಳಿಗೆ ಬೆಂಗಳೂರಿನ ಬ್ಯಾಪ್ಟಿಸ್​ ಆಸ್ಪತ್ರೆಯಿಂದ ಉಚಿತ ಕನ್ನಡಕ ನೀಡುವುದಾಗಿ ತಜ್ಞ ವೈದ್ಯ ಶಿವಾನಂದ್​ ತಿಳಿಸಿದರು.

ಶಿಬಿರದಲ್ಲಿ ತಜ್ಞ ದಂತ ವೈದ್ಯರಿಂದ ದಂತ ತಪಾಸಣೆ, ಕಣ್ಣು, ಕಿವಿ, ಮೂಗು ಸೇರಿ ಹಲವು ವೈದ್ಯಕಿಯ ತಪಾಸಣೆ, ಅಂಗವಿಕಲ ಮಕ್ಕಳಿಗೆ ತಜ್ಞ ವೈದ್ಯರಿಂದ ತಪಾಸಣೆ, ಕಲಿಕಾ ನ್ಯೂನ್ಯತೆ, ಶ್ರವಣದೋಷ, ಮಾತಿನ ಮೆದುಳುವಾತ, ಬೌದ್ಧಿಕ ವಿಕಲತೆ ಮತ್ತು ಜಿಡಿಡಿ ಹೊಂದಿರುವ ಮಕ್ಕಳಿಗೆ ತಪಾಸಣೆ ಮಾಡಲಾಯಿತು.

ಟಿಎಚ್​ಒ ಎ.ವಿ.ನಾರಾಯಣಸ್ವಾಮಿ, ಬಿ.ಎಚ್​. ಓ.ಗೀತಾ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎಸ್​.ಎಂ.ವೆಂಕಟೇಶ್​, ಹೆಲ್ತ್​ ಇನ್​ಸ್ಪೆಕ್ಟರ್​ ದೀಪಾ, ಬೆಂಗಳೂರಿನ ಬ್ಯಾಫ್ಟಿಸ್​ ಆಸ್ಪತ್ರೆಯ ತಜ್ಞ ವೈದ್ಯ ಶಿವಾನಂದ್​, ಸುನೀಲ್​ ಇತರರು ಇದ್ದರು.