ಹಿರೇಕೆರೂರ: ಭಾರತೀಯ ಮೂಲ ಸಂಸ್ಕೃತಿ, ಪರಂಪರೆ, ಸಂಸ್ಕಾರಯುತ ಜೀವನ ಬಗ್ಗೆ ಆಸಕ್ತಿ, ಒಲವು ಹೊಂದದಿರುವುದರಿಂದ ಮಾನಸಿಕ ರೋಗಿಗಳು ಹೆಚ್ಚಾಗುತ್ತಿದ್ದು, ವಿನಾಕಾರಣ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಎಂದು ತಿಪ್ಪಾಯಿಕೊಪ್ಪದ ಗುರುಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ವಿಠ್ಠಲ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಗುರುಪೂರ್ಣಿಮೆ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ತಾಯಿ, ಗುರುವಿನಿಂದ ಹಿಡಿದು ಸಮಾಜದಲ್ಲಿ ಗುರು ಹಿರಿಯರು ಲೌಕಿಕ ಜೀವನಕ್ಕೆ ಒಂದಿಲ್ಲೊಂದು ಒಂದು ರೀತಿ ನೆರವಾಗುತ್ತಾರೆ. ಇವರು ಬರೀ ಶಿಕ್ಷಾ ಗುರುವಿನ ಸ್ಥಾನ ಪಡೆಯುತ್ತಾರೆ. ಇಂದು ಸಂಪಾದನೆಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿವೆ. ಆಧ್ಯಾತ್ಮಿಕ ಮತ್ತು ಧಾರ್ವಿುಕ ತಳಹದಿಯಲ್ಲಿ ಬದುಕಬೇಕಾದ ಅವಶ್ಯಕತೆಯಿದೆ. ಇದಕ್ಕೆ ಎಲ್ಲರಲ್ಲಿ ದೇವರ ಆರಾಧನೆ, ಗುರುಗಳ ಆಶೀರ್ವಚನ, ಶ್ರದ್ಧೆ, ಭಕ್ತಿಯ ಸಮರ್ಪಣೆ ಮೂಡಿ ಬರಬೇಕಾಗಿದೆ. ಎಲ್ಲರೂ ಬಾಡಿಗೆ ಮನೆಯಲ್ಲಿ ವಾಸವಿದ್ದು, ಇಲ್ಲಿಂದ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇರುವಷ್ಟು ದಿನ ನೆಮ್ಮದಿ ಜೀವನ ಅತಿ ಮುಖ್ಯವಾಗಿದೆ ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಗುರು ಅತಿ ಮುಖ್ಯ. ಭಕ್ತಿಯ ಸಮರ್ಪಣೆ, ದೇವರ ಆರಾಧನೆಯಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಬಡವರಿಗಾಗಿ ಇಲ್ಲಿ ನಿರ್ವಿುಸಲು ಉದ್ದೇಶಿಸಿರುವ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪಕ್ಕೆ ಶಾಸಕರ ಅನುದಾನದಿಂದ 5 ಲಕ್ಷ ರೂ. ಹಾಗೂ ಸರ್ಕಾರದಿಂದ ಅನುದಾನ ದೊರಕಿಸುವುದಾಗಿ ಭರವಸೆ ನೀಡಿದರು.
ಪ್ರಕಾಶಗೌಡ ಗೌಡರ, ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಧರ್ಮದರ್ಶಿ ಶಿವಾಜಿರಾವ್ ಮಧೂರಕರ ಮಾತನಾಡಿದರು.
ಸ್ವಾಮೀಜಿಗಳ ಪಾದಪೂಜೆ, ಗಣ್ಯರಿಗೆ ಸನ್ಮಾನ ಹಾಗೂ ಮಹಾಮಂಗಳಾರತಿ, ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು.
ಉದ್ಯಮಿ ಅತಾವುಲ್ಲಾ ಹಂಸಭಾವಿ, ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರುಡಿಕಟ್ಟಿ, ಪಪಂ ಸದಸ್ಯ ಹರೀಶ ಕಲಾಲ್, ಪ್ರಶಾಂತ ಹೆಡಿಯಾಲ, ಸಿದ್ದಲಿಂಗಯ್ಯ ಸ್ವಾಮೀಜಿ, ರುದ್ರಪ್ಪ ಶೆಟ್ಟರ, ಗಂಗಾಧರ ಮಾಗನೂರ, ಮಾರುತಿ ಮಧೂರಕರ, ಎಲ್ಲಪ್ಪ ಕೊತ್ವಾಲ್, ಪುಟ್ಟನಗೌಡ ಗೌಡ್ರ, ಪಾರ್ವತಿಬಾಯಿ ಮಧೂರಕರ, ವನಜಾಕ್ಷಿ ಕಲಾಲ್, ಅನಿತಾ ಕುಂಕುಮಗಾರ, ಪರಿಮಳಾ ಶಿರಗಂಬಿ, ಗೀತಾ ಕೊತ್ವಾಲ್ ಇದ್ದರು. ಪ್ರಕಾಶ ಶಿರಗಂಬಿ, ಜ್ಯೋತಿಭಾ ಜಾದವ್, ಚಂದ್ರು ಮಧೂರಕರ ನಿರ್ವಹಿಸಿದರು.