ಯಳಂದೂರು: ಕ್ಷೇತ್ರ ವ್ಯಾಪ್ತಿಯ ಕೊಳ್ಳೇಗಾಲ, ಯಳಂದೂರು ಹಾಗೂ ಸಂತೇಮರಹಳ್ಳಿ ಹೋಬಳಿಯ ಕೆರೆಗಳು, ಕಾಲುವೆ ಅಭಿವೃದ್ಧಿ, ಚೆಕ್ ಡ್ಯಾಮ್‌ಗಳ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 4.5 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.
ತಾಲೂಕಿನ ಗೌಡಹಳ್ಳಿ ಹೊಸಕೆರೆ ಹಾಗೂ ಕೆಂಪನಪುರ ಗ್ರಾಮದ ಕೆರೆ ಅಭಿವೃದ್ಧಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗೌಡಹಳ್ಳಿ ಕೆರೆ ಅಭಿವೃದ್ಧಿಗೆ 50 ಲಕ್ಷ ರೂ. ಕೆಂಪನಪುರ ಕೆರೆ ಅಭಿವೃದ್ಧಿಗೆ 50 ಲಕ್ಷ ರೂ., ದೇಮಳ್ಳಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ 80 ಲಕ್ಷ ರೂ., ಕುಣಗಳ್ಳಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ 70 ಲಕ್ಷ ರೂ. ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 4.5 ಕೋಟಿ ರೂ. ಹಣವನ್ನು ಸಣ್ಣ ನೀರಾವರಿ ಸಚಿವ ಬೋಸರಾಜು ಬಿಡುಗಡೆ ಮಾಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಹಿರಿಕೆರೆ ಏತ ನೀರಾವರಿ ಅಭಿವೃದ್ಧಿಗೆ ಅನುದಾನ ನೀಡುವಂತೆ ನಾನು ಪ್ರಸ್ತಾವನೆ ಸಲ್ಲಿಸಿದ್ದೆ. ಮೊದಲ ಕಂತಾಗಿ 1ಕೋಟಿ ರೂ. ಅನುದಾನ ನೀಡಿದ್ದಾರೆ. ಇನ್ನಷ್ಟು ಅನುದಾನ ನೀಡುವ ವಿಶ್ವಾಸ ಇದೆ. ಅಲ್ಲದೇ ಈ ಅಧಿವೇಶನದಲ್ಲೂ 11ಕೆರೆಗಳಿಗೆ 5.14 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೂ ಅನುದಾನ ಲಭಿಸುವ ಭರವಸೆ ಇದೆ. ಇದನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡುವಂತೆ ಸಲಹೆ ನೀಡಿದರು.
ಬಿ.ರಾಚಯ್ಯ ರೈತ ಧ್ವನಿ: ನಮ್ಮ ತಂದೆ ಬಿ. ರಾಚಯ್ಯ ರೈತ ಪರ ಧ್ವನಿಯಾಗಿದ್ದರು. ಈ ಪೀಳಿಗೆಗೆ ಇದು ಗೊತ್ತಿಲ್ಲ. ಅವರ ಕಾಲದಲ್ಲಿ ಇಡೀ ರಾಜ್ಯದ ಎಲ್ಲ ವರ್ಗದ ಅನೇಕ ರೈತರಿಗೆ ತಲಾ 4 ಎಕರೆ ವ್ಯವಸಾಯದ ಭೂಮಿಯನ್ನು ನೀಡಲಾಗಿತ್ತು. ಜಿಲ್ಲೆಯ ಹೆಮ್ಮೆಯ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳನ್ನು ನಿರ್ಮಾಣ ಮಾಡಲಾಗಿತ್ತು. ಯಳಂದೂರಿನ ಹೊನ್ನುಹೊಳೆಗೆ ಅಡ್ಡಲಾಗಿ ಸುವರ್ಣಾವತಿ ಸೇತುವೆ ನಿರ್ಮಾಣವಾಗಿತ್ತು. ಅಲ್ಲದೆ ಇವರ ಕಾಲದಲ್ಲಿ ಅನೇಕ ಸಣ್ಣಪುಟ್ಟ ಡ್ಯಾಮ್‌ಗಳು, ಕೆರೆಗಳು, ಕಾಲುವೆಗಳು ನಿರ್ಮಾಣವಾಗಿದ್ದವು. ಇದು ಇಂದಿಗೂ ಜೀವಂತ ಸಾಕ್ಷಿಯಾಗಿ ನಿಂತಿವೆ. ನಾನು ಕೂಡ ರೈತಪರ ಧ್ವನಿಯಾಗಿ ನನ್ನ ಅಧಿಕಾರವಧಿಯಲ್ಲಿ ನಿಲ್ಲುತ್ತೇನೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ವಡ್ಡಗೆರೆ ದಾಸ್, ಚಾಮುಲ್ ನಿರ್ದೇಶಕ ರೇವಣ್ಣ, ಕೆಂಪನಪುರ ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ, ಗೌಡಹಳ್ಳಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ನೀರಾವರಿ ಇಲಾಖೆಯ ಎಇಇ ನಿರಂಜನ್, ಜೆಇ ಅಭಿಲಾಷ್, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಸೋಮಣ್ಣ, ನಾಗರಾಜು, ಷಡಕ್ಷರಿ, ನಾಗನಾಯಕ, ಗುರುಸಿದ್ದಪ್ಪ, ಪುಟ್ಟಸ್ವಾಮಿ, ಪಿಡಿಒ ರಾಮೇಗೌಡ, ರಮೇಶ್, ಗುತ್ತಿಗೆದಾರರಾದ ಬೆಳ್ಳೇಗೌಡ, ನಂಜೇಗೌಡ, ದೇವೇಂದ್ರ, ಗೌಡಹಳ್ಳಿ ರಾಜೇಶ್ ಸೇರಿದಂತೆ ಅನೇಕರು ಇದ್ದರು.