ಜಿಲ್ಲೆ

ವಸತಿನಿಲಯಗಳ ಅಭಿವೃದ್ಧಿಗೆ ಒತ್ತು

ಸೋಮಲಿಂಗ ತಳವಾರ

ಬೈಲಹೊಂಗಲ: ವಸತಿ ನಿಲಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗಬೇಕೆಂದರೆ ಜಿಲ್ಲಾ ಮತ್ತು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಅತಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಸಂಗೊಳ್ಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೆನಿಕ ಶಾಲೆಯ ಸಭಾಭವನದಲ್ಲಿ ಮಂಗಳವಾರ ಅವರ ಅಧ್ಯತೆಯಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗಮಟ್ಟದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಆಹಾರ ಸಾಮಗ್ರಿಗಳ ಡೋರ್​ ಡೆಲಿವರಿ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಯಾಗಿ ಹಾಸ್ಟೆಲ್​ನಲ್ಲಿದ್ದು, ಅಲ್ಲಿನ ವಾತಾವರಣ ಅನುಭವಿಸಿದ್ದೇನೆ. ಆದರೆ ಪ್ರಸ್ತುತ ಸರ್ಕಾರ ವಿದ್ಯಾರ್ಥಿಗಳ ಶ್ರೇಯೋಭಿವದ್ಧಿಗಾಗಿ ಸಾಕಷ್ಟು ಅನುದಾನ, ಪ್ರೋತ್ಸಾಹ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತಷ್ಟು ವಸತಿ ಶಾಲೆಗಳ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.

ಇಲಾಖೆಯ ಕಾರ್ಯದರ್ಶಿ ಸಂಜಯ ಶೆಟ್ಟೆನ್ನವರ, ಆಯುಕ್ತ ಕೆ.ಶ್ರೀನಿವಾಸ, ಜಂಟಿ ನಿರ್ದೇಶಕ ಬಿ.ಎನ್​. ಪ್ರದಿಪ್​, ಅಲೆಮಾರಿ ಕೋಶದ ಜಂಟಿ ನಿರ್ದೇಶಕ ಜಿ.ಜಗದೀಶ, ಜಿಪಂ ಸಿಇಒ ರಾಹುಲ್​ ಶಿಂಧೆ, ಜಿಲ್ಲಾ ಕಲ್ಯಾಣಾಧಿಕಾರಿ ಹರ್ಷ ಎಸ್​., ಎಸ್​.ಎನ್​. ಬಾಣಸಿ ಇತರರಿದ್ದರು.