ಜಿಲ್ಲೆ

ಬಜೆಟ್​ ಅನುಷ್ಠಾನಕ್ಕೆ ಒತ್ತು: ಮೊದಲ ಹಂತದಲ್ಲಿ ಇಲಾಖಾವಾರು ಸಭೆಗೆ ಚಾಲನೆ ನೀಡಿದ ಸಿಎಂ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಮುಂಗಡಪತ್ರದಲ್ಲಿ ಘೋಷಿಸಿದ ಯೋಜನೆಗಳ ತ್ವರಿತ ಅನುಷ್ಠಾನದ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಬಜೆಟ್​ನಲ್ಲಿ ಪ್ರಸ್ತಾಪಿಸಿದ ಯೋಜನೆ, ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಜಾರಿಗೆ ಪೂರಕವಾಗಿ ಏಪ್ರಿಲ್​ ಅಂತ್ಯದೊಳಗೆ ಆದೇಶ ಹೊರಡಿಸಲಾಗುವುದು ಎಂಬ ಭರವಸೆ ನೀಡಿದ್ದರು. ಇದಕ್ಕಾಗಿ ರಚಿತ ಮುಖ್ಯ ಕಾರ್ಯದರ್ಶಿ ನೇತೃತ್ವ ಪಿ.ರವಿಕುಮಾರ್​ ಸಮಿತಿ ತನ್ನ ಜವಾಬ್ದಾರಿ ನಿರ್ವಹಿಸಿದ್ದು, ಆದ್ಯತಾಪಟ್ಟಿಯಲ್ಲಿರುವ ಕಾರ್ಯಕ್ರಮಗಳಿಗೆ ಪ್ರಸ್ತಾವನೆಗಳನ್ನು ಅಣಿಗೊಳಿಸಿದೆ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶೇ.80 ಆದೇಶ ಹೊರಡಿಸಲಾಗಿದ್ದು, ಕಾನೂನು ಮತ್ತು ತಾಂತ್ರಿಕ ಕಾರಣಗಳನ್ನು ಬಗೆಹರಿಸಿ ಉಳಿದ ಶೇ.20ಕ್ಕೂ ಆದೇಶ ಪ್ರಕಟವಾಗಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.

ಅನುಷ್ಠಾನಕ್ಕೆ ಒತ್ತು: ಯೋಜನೆ, ಕಾರ್ಯಕ್ರಮಗಳಿಗೆ ಆದೇಶ ಹೊರಡಿಸಿದರಷ್ಟೇ ಸಾಲದು. ಉತ್ತರದಾಯಿತ್ವ ನಿಗದಿ ಮಾಡಿದರೆ ಪರಿಣಾಮಕಾರಿ ಅನುಷ್ಠಾನ ಸಾಧ್ಯವೆಂಬ ಕಾರಣಕ್ಕೆ ಇಲಾಖಾವಾರು ಚರ್ಚೆ ಶುರು ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂಬ ಅಭಿಪ್ರಾಯ ರೂಪಿಸಲು ನೆರವಾಗುವ ವೈದ್ಯಕಿಯ ಶಿಕ್ಷಣ, ಲೋಕೋಪಯೋಗಿ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್​, ಜಲಜೀವನ್​ ಮಿಷನ್​ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಬೊಮ್ಮಾಯಿ ಮೊದಲ ಆದ್ಯತೆ ನೀಡಿದ್ದಾರೆ. ಆಯಾ ಇಲಾಖೆಯಲ್ಲಿ ತುರ್ತು ಅಗತ್ಯದ, ಮಾಡಲೇಬೇಕಾದ ಕೆಲಸ&ಕಾರ್ಯಗಳನ್ನು ಪಟ್ಟಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿ, ಅನುಷ್ಠಾನಕ್ಕೆ ಕಾಲಮಿತಿ ಗೊತ್ತುಪಡಿಸಿದ್ದಾರೆ. ಜತೆಗೆ ಪ್ರತಿಯೊಂದು ಹಂತದಲ್ಲಿ ದಕ್ಷತೆ, ಪಾರದರ್ಶಕತೆ ಬಗ್ಗೆ ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಆಡಳಿತಯಂತ್ರಕ್ಕೂ ಚುರುಕು: ಮುಖ್ಯಸ್ಥರಿಗೆ ಟಾಸ್ಕ್​ ನಿಗದಿಪಡಿಸಿದರೆ, ಇಲಾಖೆ ರಾಜ್ಯಮಟ್ಟದ ಇನ್ನುಳಿದ ಅಧಿಕಾರಿಗಳಲ್ಲೂ ಹುರುಪು ತುಂಬಲಿದೆ. ಇದು, ವಿಭಾಗ ಮತ್ತು ಜಿಲ್ಲಾಮಟ್ಟದ ಹಂತದಲ್ಲೂ ಸಕಾರಾತ್ಮಕ ಬದಲಾವಣೆ ತರಲಿದೆ ಎನ್ನುವುದು ಸಿಎಂ ಬೊಮ್ಮಾಯಿ ಚಿಂತನೆಯಾಗಿದೆ. ದೀರ್ಘಾವಧಿ ಬಳಿಕ ಪ್ರಗತಿ ಪರಿಶೀಲಿಸಿ ಅಧಿಕಾರಿಗಳಿಗೆ ತರಾಟೆ, ಚಾಟಿ ಬೀಸುವ ಬದಲು ಪ್ರಾರಂಭಿಕ ಹಂತದಿಂದಲೇ ಮೇಲ್ವಿಚಾರಣೆ ಸೂಕ್ತವೆಂಬ ನಿಲುವು ತಳೆದಿದ್ದಾರೆ. ಎರಡನೇ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಲಾ ಒಂದು ದಿನ ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಿದ್ದಾರೆ.

ಬಜೆಟ್​ನಲ್ಲಿ ಪ್ರಕಟಿಸಿದ ಯೋಜನೆಗಳು, ಕಾರ್ಯ ಕ್ರಮಗಳ ತ್ವರಿತ ಅನುಷ್ಠಾನಕ್ಕೆ ಪೂರಕವಾಗಿ ಮೊದಲ ಹಂತದಲ್ಲಿ ಇಲಾಖಾವಾರು ಸಭೆ ಶುರು ಮಾಡಿರುವೆ. ಮುಂದಿನ ವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ನಡೆಸಿ ಜಿಲ್ಲಾಮಟ್ಟದ ಆಡಳಿತ ಯಂತ್ರಕ್ಕೆ ಚುರುಕು ನೀಡಲು ತೀರ್ಮಾನಿಸಿರುವೆ.| ಬಸವರಾಜ ಬೊಮ್ಮಾಯಿ ಸಿಎಂ

ವೈದ್ಯಕಿಯ ಶಿಕ್ಷಣ
# ಹುಬ್ಬಳ್ಳಿಯಲ್ಲಿ 250 ಕೋಟಿ ರೂ.ಗಳ ವೆಚ್ಚದ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರಕ್ಕೆ ಆಗಸ್ಟ್​ 15ರೊಳಗೆ ಶಂಕುಸ್ಥಾಪನೆಗೆ ಕ್ರಮ 
#ರಾಜೀವ್​ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಿಂದ ಅಗತ್ಯವಿರುವ ಪಿಜಿ ಸ್ಥಾನಗಳ ಬಗ್ಗೆ ಮಾಹಿತಿಗೆ ಸೂಚನೆ 
# ರಾಮನಗರ ಜಿಲ್ಲೆಯಲ್ಲಿ ಆರೋಗ್ಯ ವಿವಿ ಸ್ಥಾಪನೆ ಪ್ರಕ್ರಿಯೆ ಪೂರ್ಣಗೊಳಿಸಿ ಜೂನ್​ ಅಂತ್ಯದೊಳಗೆ ವಿವಿ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭ. 
# ಬೆಂಗಳೂರಿನಲ್ಲಿ ನಿಮ್ಹಾನ್ಸ್​ ಮೂಲಕ ಅಂಗಾಂಗ ದಾನ ಪ್ರಕ್ರಿಯೆ ಈ ವರ್ಷವೇ ಪ್ರಾರಂಭ 
# ಚಿತ್ರದುರ್ಗದಲ್ಲಿ ವೈದ್ಯ ಕಾಲೇಜು ನಿರ್ಮಾಣಕ್ಕೆ ವೇಗ

ಲೋಕೋಪಯೋಗಿ
* ರಸ್ತೆ ಡಾಂಬರೀಕರಣಕ್ಕೆ ಗುರುತಿಸಿದ 1008 ಕಿ.ಮೀ.ಗೆ ಮಳೆಗಾಲಕ್ಕೆ ಮುನ್ನ ಟೆಂಡರ್​ ಪ್ರಕ್ರಿಯೆ, ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಮುಗಿಸಲು ಡಿಸೆಂಬರ್​ ಗಡುವು 
* ರಾಜ್ಯ ಹೆದ್ದಾರಿ, ಜಿಲ್ಲಾಪ್ರಮುಖ ರಸ್ತೆಗಳ ವ್ಯಾಪ್ತಿಯ 26 ಸೇತುವೆಗಳು ಸೇರಿ ತುರ್ತು ಅಗತ್ಯದ, ವಾಹನಗಳ ಸಂಚಾರ ದಟ್ಟಣೆ ಹೆಚ್ಚಿರುವ ಸೇತುವೆಗಳಿಗೆ ಆದ್ಯತೆ.

ಆರ್​ಡಿಪಿಆರ್​ ಇಲಾಖೆ
* ಸ್ವಂತ ಕಟ್ಟಡಗಳಿಲ್ಲದ 1000 ಅಂಗನವಾಡಿ ಗಳಿಗೆ ನರೇಗಾ ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿತ ಕಟ್ಟಡಗಳನ್ನು ಇಲಾಖೆಗಳ ಸಮನ್ವಯದೊಂದಿಗೆ ಗುರುತಿಸುವುದು 
* ಆರ್​ಡಿಪಿಆರ್​ನಿಂದ ಪ್ರತಿ ಟಕಕ್ಕೆ ಒದಗಿಸುವ ಐದು ಲ ರೂ.ಗಳ ಮೊತ್ತವನ್ನು ಕ್ರಿಯಾ ಯೋಜನೆಗಳಲ್ಲಿ ಕಡ್ಡಾಯವಾಗಿ ನಮೂದಿಸಲು ಪಿಡಿಒಗಳಿಗೆ ರ್ನಿದಿಷ್ಟ ಸೂಚನೆ, ಆಕಾಂ ತಾಲೂಕುಗಳಿಗೆ ಆದ್ಯತೆ
* ನರೇಗಾ ಯೋಜನೆಯಡಿ ರೈತರ ಹೊಲಗಳಿಗೆ ಹೋಗುವ ರಸ್ತೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು. ರಸ್ತೆಗಳ ನಿರ್ಮಾಣಕ್ಕೆ ಡಿಸೆಂಬರ್​ ಗಡುವು 
* ಅಮೃತ್​ ಗ್ರಾಮ ಪಂಚಾಯತ್​ ಯೋಜನೆಯಡಿ 750 ಗ್ರಾಪಂಗಳಿಗೆ ತಲಾ 25 ಲ ರೂ.ಗಳ ವೆಚ್ಚದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜೂನ್​ ಅಂತ್ಯಕ್ಕೆ ಪೂರ್ಣಗೊಳಿಸುವುದು. ಗ್ರಾಮ ಪಂಚಾಯಿತಿ ರಸ್ತೆಗಳಿಗೆ ಹೆಚ್ಚಿನ ಆದ್ಯತೆ. 
* ಜಲಜೀವನ್​ ಮಿಷನ್​ ಯೋಜನೆಯ ಬ್ಯಾಚ್​&1 ರಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸುವುದು. ಬ್ಯಾಚ್​&2ರ ಟೆಂಡರ್​ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಮೇ ಅಂತ್ಯ ಗಡುವು