ಜಿಲ್ಲೆ

ಆಡಳಿತದಲ್ಲಿ ಸಮನ್ವಯತೆ ಸಾಧನೆಗೆ ಒತ್ತು

ಕೋಲಾರ ಡೆಸ್ಕ್

ನೂತನ ಡಿಸಿಯಾಗಿ ಡಾ.ಎಂ.ಆರ್​.ರವಿ ಅಧಿಕಾರ ಸ್ವೀಕಾರ | ಜನಸಾಮಾನ್ಯರಿಗೆ ತ್ವರಿತ ಸ್ಪಂದನೆ ಭರವಸೆ

ಕೋಲಾರ : ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್​.ರವಿ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ಮಂಗಳಾ ಅಧಿಕಾರ ಹಸ್ತಾಂತರಿಸಿದರು.

ಡಿಸಿ ಡಾ.ಎಂ.ಆರ್​.ರವಿ ಮಾತನಾಡಿ, ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಕೋಲಾರ ಜಿಲ್ಲೆಯು ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಇಲ್ಲಿ ಕೆಲಸ ಮಾಡುವುದು ಉತ್ತಮ ಅವಕಾಶ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

ಜಿಲ್ಲೆಯ ಸಂಪನ್ಮೂಲಗಳ ಕ್ರೋಢಿಕರಣ, ಆಡಳಿತದಲ್ಲಿ ಸಮನ್ವಯತೆ ಸಾಧಿಸುವುದು. ವೈಯಕ್ತಿಕವಾಗಿಯೂ, ವೃತ್ತಿ ಜೀವನದಲ್ಲೂ ಜಿಲ್ಲೆಯಲ್ಲಿ ಕೆಲಸ ಮಾಡುವುದು ಒಂದು ಮೈಲಿಗಲ್ಲು ಎಂದು ಅಭಿಪ್ರಾಯಪಟ್ಟರು.

ಬಹಳಷ್ಟು ಅವಕಾಶಗಳು ತುಂಬಿರುವ ಜಿಲ್ಲೆ ಕೋಲಾರ, ಅನೇಕ ಉದ್ಯಮಗಳಿವೆ, ಸಂಸ್ಥೆಗಳಿವೆ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೆಡಿಕಲ್​ ಕಾಲೇಜು ಸ್ಥಾಪನೆಯಾಗಬಹುದಾದ ಸಾಧ್ಯತೆಯಿದೆ. ಜನರ ಜತೆ ಸಂಪರ್ಕದಲ್ಲಿ ಇದ್ದುಕೊಂಡು ಎಲ್ಲರ ಅಭಿಪ್ರಾಯ ಪಡೆದು ಸಮನ್ವಯದ ಕೊರತೆ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳ ತಂಡವಿದ್ದು, ಅವರು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಜನರು ಪ್ರಜ್ಞಾವಂತರಾಗಿರುವುದರಿಂದ ಅಧಿಕಾರಿಗಳ ಜತೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಹೊಣೆಗಾರಿಕೆಯಿಂದ ಅಧಿಕಾರಿಗಳು ಜನಸಾಮಾನ್ಯರಿಗೆ ತ್ವರಿತ ಸ್ಪಂದನೆ ನೀಡಬೇಕು. ಜಿಲ್ಲೆಯ ಬಗ್ಗೆ ಸಮಗ್ರ ಚಿತ್ರಣ ಪಡೆದು ಎಲ್ಲ ತಾಲೂಕುಗಳಿಗೆ ಭೇಟಿ ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾವುದು ಎಂದು ಹೇಳಿದರು.