ಮಡಿಕೇರಿ: ಯುವ ಬ್ರಿಗೇಡ್ ಸಂಸ್ಥಾಪಕ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಂಗಳವಾರ ಮಡಿಕೇರಿ ತಾಲೂಕಿನ ಕತ್ತಲೆಕಾಡು ಗ್ರಾಮಕ್ಕೆ ಭೇಟಿ ನೀಡಿದರು.
ತಮ್ಮ ಆಪ್ತರ ಜತೆಗೆ ಮುಂಜಾನೆ ವೇಳೆ ಆಗಮಿಸಿದ ಅವರು, ಇಲ್ಲಿನ ಪರಿಸರದಲ್ಲಿ ಸಂಚರಿಸಿ ಪ್ರಕೃತಿ ಸೌಂದರ್ಯ ಸವಿದರು. ಇದೇ ವೇಳೆ ಅಗ್ನಿವೀರ್ ಆಯ್ಕೆ ಸಂಬಂಧ ಪೂರ್ವ ತಯಾರಿಯಲ್ಲಿದ್ದ ಯುವ ಸಮೂಹದೊಂದಿಗೆ ಬೆರೆತು ಮಾಹಿತಿ ವಿನಿಮಯ ಮಾಡಿಕೊಂಡರು. ನಂತರ ಸ್ಥಳೀಯ ಯುವಕರ ಜತೆ ಪರಿಸರ ಕಾಳಜಿ ಮತ್ತು ಪ್ರಕೃತಿ ಸೌಂದರ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಚರ್ಚಿಸಿದರು. ಪ್ರವಾಸಿಗರು ಹಾಗೂ ಕೆಲವು ಕಿಡಿಗೇಡಿಗಳಿಂದ ಇಲ್ಲಿನ ಸೌಂದರ್ಯಕ್ಕೆ ಹಾನಿಯಾಗಿರುವುದನ್ನು ಕಂಡು ವಿಷಾಧ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಪ್ರತಿಯೊಂದು ಸ್ಥಳದ ಸೌಂದರ್ಯ ವೃದ್ಧಿಗೆ ನಾವು ಕೈಜೋಡಿಸಬೇಕು. ಅದನ್ನು ಬಿಟ್ಟು ಸುಂದರ ಪ್ರದೇಶಗಳ ಸೌಂದರ್ಯ ಹಾಳು ಮಾಡುತ್ತಿರುವುದು ಸರಿಯಲ್ಲ. ಹಿಂದಿನ ತಲೆಮಾರಿನವರು ನಮ್ಮಲ್ಲಿ ಸುಂದರವಾಗಿ ಪರಿಸರವನ್ನು ಉಳಿಸಿಕೊಟ್ಟಿದ್ದಾರೆ. ಮುಂದಿನ ತಲೆಮಾರಿಗೆ ಅದನ್ನು ಸ್ವಚ್ಛಂದವಾಗಿ ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಕೊಡಗಿನಲ್ಲಿ ಪ್ರವಾಸೋದ್ಯಮದಿಂದ ಅನೇಕರು ಲಾಭಗಳಿಸುತ್ತಿದ್ದಾರೆ. ಜಿಲ್ಲೆಯ ಹೋಂಸ್ಟೇ, ರೆಸಾರ್ಟ್‌ಗೆ ಬರುವ ಪ್ರವಾಸಿಗರಿಗೆ ಅದರ ಮಾಲೀಕರು ಸ್ವಚ್ಛತೆ ಬಗ್ಗೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು. ಸುಂದರ ತಾಣಗಳಲ್ಲಿ ಮದ್ಯ ಸೇವನೆ ಹಾಗೂ ಇನ್ನಿತರೆ ಚಟುವಟಿಕೆ ಮೂಲಕ ಸೌಂದರ್ಯಕ್ಕೆ ಧಕ್ಕೆ ತರುವವರಿಗೆ ಎಚ್ಚರಿಕೆ ನೀಡಿ ಮುಂದೆ ಈ ರೀತಿ ಮಾಡದಂತೆ ಅರಿವು ಮೂಡಿಸುವ ಕಾರ್ಯವಾಗಬೇಕೆಂದು ಆಶಯ ವ್ಯಕ್ತಪಡಿಸಿದರು. ತಮ್ಮೂರಿನಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಜನರಿಗೆ ಜಾಗೃತಿ ಮೂಡಿಸುವಂತೆ ಯುವಕರಿಗೆ ಸಲಹೆ ಕೊಟ್ಟರು.
ಸ್ಥಳೀಯರಾದ ಬಿ.ಬಿ.ಮಹೇಶ್, ಕಿಶೋರ್ ರೈ ಕತ್ತಲೆಕಾಡು, ವಿನೀತ್, ಚೇತನ್ ಪಾಪಯ್ಯ, ಅಕ್ಷಯ್ ರೈ, ಗಿರೀಶ್ ಕಾಂತ್, ಕೃತಿಕ್, ಪಿ.ಕೆ.ಸತೀಶ್ ರೈ, ಉಮೇಶ್ ಈ ಸಂದರ್ಭ ಇದ್ದರು.