ಬೀಳಗಿ: ಭಾವೈಕ್ಯತೆ ಮತ್ತು ಅಧ್ಯಾತ್ಮ ಮನುಕುಲದ ಜೀವಾಳ. ಸಾತ್ವಿಕ, ತಾತ್ವಿಕ ಹಿತ ಚಿಂತನೆಗಳನ್ನು ಬೆಳೆಸುವುದರ ಮೂಲಕ ಭಾವೈಕ್ಯತೆಯ ಸೇತುವೆ ನಿರ್ಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಶಾಸಕ ಹನುಮಂತ ಆರ್. ನಿರಾಣಿ ಹೇಳಿದರು.
ಸ್ಥಳೀಯ ಶ್ರೀ ಕಲ್ಮಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದ ಭಾವೈಕ್ಯ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಶಾಂತಿ ನೆಮ್ಮದಿ ಒದಗಿಸುವ ಅವರ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಅವರು ವೀರಶೈವ ಲಿಂಗಾಯತ ಸಮಾಜಕ್ಕೆ ಭದ್ರ ಬುನಾದಿ ಹಾಕಿ ಮಾನವ ಸಮಾಜಕ್ಕೆ ಒಳ್ಳೆಯದನ್ನು ಬಯಸಿದ್ದಾರೆ ಎಂದರು.
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, ಲಿಂಗಾಯತ ಧರ್ಮದ ಮೂಲ ಸಿದ್ಧಾಂತಗಳನ್ನು ಪ್ರತಿಪಾದಿಸಲು ಮತ್ತು ಶೈವ ಪರಂಪರೆಯನ್ನು ಬಲಪಡಿಸಲು ಅವರು ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು. ಒಂದು ಗಿಡಕ್ಕೆ ಮೂಲ ಬೇರು ಎಷ್ಟು ಬಹಳ ಮುಖ್ಯವಾಗಿದೇಯೋ, ಅದೇ ರೀತಿ ವೀರಶೈವ ಲಿಂಗಾಯತ ಧರ್ಮದ ಮೂಲ ಬೇರಾದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಪಾತ್ರವೂ ಅಷ್ಟೆ ಮುಖ್ಯವಾಗಿದೆ ಎಂದರು.
ಕೆಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಅವರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.
ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು, ಬೂದಿಹಾಳ ಕೀರೇಶ್ವರ ಶ್ರೀಮಠದ ಪ್ರಭು ಮಹಾಸ್ವಾಮಿಗಳು, ಸೋಮಪ್ಪಯ್ಯನ ಮಠದ ಚನ್ನಬಸವ ಮಹಾಸ್ವಾಮಿಗಳು, ಬೀಳಗಿ, ಕುಂದರಗಿ ಚರಂತಿಮಠ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಕ್ಕಯ್ಯ ಮಹಾಸ್ವಾಮಿಗಳು, ಪಟ್ಟಣ ಪಂಚಾಯತ ಅಧ್ಯಕ್ಷ ಮುತ್ತು ಬೋರ್ಜಿ, ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಬಸವರಾಜ ಉಮಚಗಿಮಠ, ತಾಲೂಕು ಅಧ್ಯಕ್ಷ ಈರಯ್ಯ ಗೋಠೆ, ಶ್ರೀಶೈಲಯ್ಯ ಯಂಕಂಚಿಮಠ, ಬಾಪೂಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುತ್ತು ವಸದ, ಆನಂದ ಜಡಿಮಠ ಮತ್ತಿತರರಿದ್ದಾರೆ.