ಜಿಲ್ಲೆ

ಭಾವನಾತ್ಮಕ ಮಾತಿನಿಂದ ಪ್ರಯೋಜನವಿಲ್ಲ

ಎನ್.ವೆಂಕಟೇಶ್

ಡಿನೋಟಿಫಿಕೇಷನ್ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಲಿ | ಎಚ್‌ಡಿಕೆಗೆ ಸಚಿವ ಕೃಷ್ಣಬೈರೇಗೌಡ ಸವಾಲು


ಚಿಕ್ಕಬಳ್ಳಾಪುರ : ಡಿನೋಟಿಫಿಕೇಶನ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರೆ ಏನೂ ಪ್ರಯೋಜನವಿಲ್ಲ. ದಾಖಲೆ ಸಮೇತ ವ್ಯಕ್ತವಾಗಿರುವ ಆರೋಪಗಳಿಗೆ ಉತ್ತರ ನೀಡಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸವಾಲೆಸೆದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೆಂಗೇನಹಳ್ಳಿ ಬಳಿ ಕೋಟ್ಯಂತರ ರೂ. ಮೌಲ್ಯದ ಜಮೀನನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಇದು ಹಿಟ್ ಆಂಡ್ ರನ್ ಇಲ್ಲವೇ ಗಾಳಿಯಲ್ಲಿ ಗುಂಡು ಹೊಡೆಯುವ ಆರೋಪವಲ್ಲ. ಅಧಿಕೃತ ದಾಖಲೆಗಳನ್ನಿಟ್ಟುಕೊಂಡು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದಕ್ಕೆ ಸರಿಯಾಗಿ ಉತ್ತರ ನೀಡುವುದನ್ನು ಬಿಟ್ಟು ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡುವುದರಿಂದ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.

ಹಿಂದೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಸಲಹೆಯನ್ನು ಧಿಕ್ಕರಿಸಿ ಡಿನೋಟಿಫಿಕೇಶನ್ ಮಾಡಿಲ್ಲವಾ? ಸತ್ತ ವ್ಯಕ್ತಿಯ ಹೆಸರಿನಲ್ಲಿ ಡಿನೋಟಿಫೈ ಆಗಿದೆಯೇ, ಇಲ್ಲವೇ? ಕುಮಾರಸ್ವಾಮಿ ಕುಟುಂಬದವರ ಹೆಸರಿಗೆ
ಜಿಪಿಎ ಆಗಿತ್ತಲ್ಲವಾ? ಕೊನೆಗೆ ಅವರ ಕುಟುಂಬದ ವಶಕ್ಕೆ ಜಮೀನು ಬಂದಿದೆ ಅಲ್ಲವೇ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಎಸ್‌ಐಟಿ ತನಿಖೆಗೆ ಆಗ್ರಹ
ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಗಂಭೀರ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಸಚಿವ ಕೃಷ್ಣಬೈರೇಗೌಡ ಒತ್ತಾಯಿಸಿದರು. ಈಗಾಗಲೇ ಪ್ರಕರಣದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತನಿಖೆ ವಿಚಾರವಾಗಿ ಚರ್ಚೆ ನಡೆಸಲಾಗಿದೆ ಎಂದರು. ಮುನಿರತ್ನ ಅವರು ಒಕ್ಕಲಿಗ, ದಲಿತರು ಮತ್ತು ಮಹಿಳೆಯರನ್ನು ಅವಹೇಳನಕಾರಿಯಾಗಿ ಟೀಕಿಸಿದ್ದು ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ಏಡ್ಸ್ ರೋಗಿಯ ಮೂಲಕ ಹನಿಟ್ರ್ಯಾಪ್ ಪ್ರಕರಣವು ಗಂಭೀರವಾದುದು. ಇದರಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಸ್ವತಃ ಬಿಜೆಪಿ ಕಾರ್ಯಕರ್ತೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಇಷ್ಟಾದರೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು. ಇದೆಲ್ಲವನ್ನೂ ಗಮನಿಸಿದರೆ ಇವರು ಸಹ ಕುಮ್ಮಕ್ಕು ನೀಡುತ್ತಿದ್ದರು ಎಂದೇ ಹೇಳಬೇಕಾಗುತ್ತದೆ ಎಂದರು.

ಶ್ರೀಗಳ ನೇತೃತ್ವದಲ್ಲಿ ಖಂಡನಾರ್ಹ ಸಭೆಗೆ ಮನವಿ
ಒಕ್ಕಲಿಗರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಖಂಡನಾರ್ಹ ಸಭೆಯನ್ನು ನಡೆಸಬೇಕು ಎಂದು ಕೃಷ್ಣಬೈರೇಗೌಡ ಮನವಿ ಮಾಡಿದರು. ಸ್ವಪಕ್ಷೀಯ ಶಾಸಕ ಮುನಿರತ್ನ ಪ್ರಕರಣದಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಬದಲಿಗೆ ಪರೋಕ್ಷವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲೂ ಶಿಸ್ತು ಕ್ರಮ ತೆಗೆದುಕೊಳ್ಳುವ ನಿರೀಕ್ಷೆ ಇಲ್ಲ. ಇದಕ್ಕೆ ಸಮುದಾಯದವರು ಪಕ್ಷಭೇದ ಮರೆತು ಪ್ರಶ್ನಿಸಬೇಕಾಗಿದೆ. ಸರ್ಕಾರದಲ್ಲಿನ ಒಕ್ಕಲಿಗ ಸಮುದಾಯದ ಕೆಲ ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಒತ್ತಾಯಿಸಿದ್ದಾರೆ. ಇದಕ್ಕೆ ಆದಿಚುಂಚನಗಿರಿ ಮಠದ ಶ್ರೀಗಳ ನೇತೃತ್ವದಲ್ಲಿ ಖಂಡನಾರ್ಹ ಸಭೆಯನ್ನು ಕೈಗೊಳ್ಳಬೇಕು. ಇದಕ್ಕೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಚರ್ಚಿಸಲಿದ್ದು ಶ್ರೀಗಳ ನಿರ್ಧಾರಕ್ಕೆ ಬದ್ಧ ಎಂದರು.

ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳಿ
ಶಾಸಕ ಮುನಿರತ್ನ ರಾಕೆಟ್ ದಂಧೆಯ ಹನಿಟ್ರ್ಯಾಪ್‌ಗೆ ಸಿಲುಕಿರುವವರು ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಕೃಷ್ಣಬೈರೇಗೌಡ ಸಲಹೆ ನೀಡಿದರು. ಎದುರಾಳಿ ನಾಯಕರು, ಅಧಿಕಾರಿಗಳ ಬಳಿಗೆ ಎಚ್‌ಐವಿ ಸೋಂಕಿತರನ್ನು ಕಳುಹಿಸಿ, ಟ್ರ್ಯಾಪ್ ಮಾಡುತ್ತಿರುವುದರ ಬಗ್ಗೆ ಬಿಜೆಪಿ ಕಾರ್ಯಕರ್ತೆಯೇ ಹೇಳಿದ್ದಾರೆ. ಆಕೆಯ ಮೇಲೂ ಅತ್ಯಾಚಾರವಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಇದರ ನಡುವೆ ಏಡ್ಸ್ ಮುಂಜಾಗ್ರತಾ ಕ್ರಮವಾಗಿ ವೈದ್ಯ ಮತ್ತು ರಾಜಕೀಯ ನಾಯಕರೂ ಆಗಿರುವ ರಂಗನಾಥ್ ಸಲಹೆ ನೀಡಿದ್ದಾರೆ. ಇದು ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಮಾತು. ಇದಕ್ಕೆ ಸಂಬಂಧಪಟ್ಟವರು ಮೊದಲು ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ತಿಳಿಸಿದರು.

ಬೇಸರಕ್ಕೆ ಕಾರಣವಾದ ರಾಜಕೀಯ ಬೆಳವಣಿಗೆಗಳು
ಈಗಾಗಲೇ ರಾಜಕೀಯ ಬೆಳವಣಿಗೆಗಳ ಬಗ್ಗೆ ಜನರಲ್ಲಿ ಬೇಸರ ಮೂಡಿದೆ. ಈಗ ಮತ್ತಷ್ಟು ಮುಜುಗರಕ್ಕೆ ಎಡೆಮಾಡಿಕೊಡುವ ಪ್ರಕರಣ ನಡೆದಿದೆ. ಯಾರೇ ಆಗಲಿ, ಯಾವುದೇ ಪಕ್ಷದಲ್ಲಿರಲಿ ತಪ್ಪೆಸಗುವವರು ತಪ್ಪಿತಸ್ಥರೇ. ಇಂತಹವರನ್ನು ಸಮರ್ಥಿಸಿಕೊಳ್ಳಬಾರದು. ಪಾಠ ಕಲಿಸುವ ನಿರ್ಧಾರ ಕೈಗೊಳ್ಳಬೇಕು. ಇಲ್ಲ್ಲದಿದ್ದಲ್ಲಿ ರಾಜಕೀಯ ನಾಯಕರ ಬಗ್ಗೆ ಜನರು ಮತ್ತಷ್ಟು ಅಸಹ್ಯಪಟ್ಟುಕೊಳ್ಳುತ್ತಾರೆ ಎಂದು ಕೃಷ್ಣೇಬೈರೇಗೌಡ ಹೇಳಿದರು.