ಎಮ್ಮಿಗನೂರು ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಎಚ್.ಜೆ.ಶಾರದಾ ಮಾತನಾಡಿದರು. ಉಪಾಧ್ಯಕ್ಷ ಗಾದಿಲಿಂಗಪ್ಪ, ಪಿಡಿಒ ತಾರು ಲಕ್ಷ್ಮಣನಾಯ್ಕ, ಕೆಸಿಆರ್‌ಒ ಸದಸ್ಯ ಎಚ್.ಸಿ.ರಾಘವೇಂದ್ರ ಇದ್ದರು. 
ಜಿಲ್ಲೆ

ಎಮ್ಮಿಗನೂರು ಗ್ರಾಪಂ ಸಭೆಗೆ ಅಧಿಕಾರಿಗಳು ಗೈರು

ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಪಂ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷೆ ಎಚ್.ಜೆ.ಶಾರದಾ ಅಧ್ಯಕ್ಷತೆಯಲ್ಲಿ ಕರೆದಿದ್ದ ಕೆಡಿಪಿ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿದ್ದು, ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಎರಡೂವರೆ ವರ್ಷಗಳಿಂದ ಕೆಡಿಪಿ ಸಭೆ ಜರುಗಿಸಿಲ್ಲ. ಈಗಲೂ ಕಾಟಾಚಾರಕ್ಕೆ ಸಭೆ ಆಯೋಜಿಸಿದ್ದು, ನಿಗದಿಯಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿಲ್ಲ. ಗ್ರಾಪಂ ಸ್ಥಾಯಿಸಮಿತಿ ರಚಿಸಿಲ್ಲ. ಕೆಡಿಪಿ ಸಭೆ ಕುರಿತು ನಮಗೆ ಮಾಹಿತಿ ನೀಡಿಲ್ಲ ಎಂದು ಎಚ್.ಎಸ್.ಜಡೇಶ ಹಾಗೂ ಇತರರು ಆಕ್ಷೇಪವ್ಯಕ್ತಪಡಿಸಿದರು.

ಪಿಡಿಒ ತಾರು ಲಕ್ಷ್ಮಣನಾಯ್ಕ ಮಾತನಾಡಿ, ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿರುವ ಕುರಿತು ತಾಪಂ ಇಒ ಗಮನಕ್ಕೆ ತರಲಾಗುವುದು ಎಂದರು.

ತಂತ್ರಜ್ಞಾನ

ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಎಚ್.ಸಿ.ರಾಘವೇಂದ್ರ ಮಾತನಾಡಿ, ಮೊಬೈಲ್ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಸೇವೆ ಒದಗಿಸುವಲ್ಲಿ, ಮಹಿಳಾ, ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಂತೆ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜೆಸ್ಕಾಂ ಜೆಇ ಬಸವರಾಜ ಮಾತನಾಡಿ, ಅನಧಿಕೃತ ವಿದ್ಯುತ್ ಬಳಕೆದಾರರು ಮೀಟರ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಮಹಿಳಾ ಮೇಲ್ವಿಚಾರಕಿ ನಾಗುಬಾಯಿ ಮಾತನಾಡಿ, ಮಾತೃವಂದನೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆ ಹೆಣ್ಣುಮಗುವಾದಲ್ಲಿ ತಾಯಿ ಖಾತೆಗೆ 6ಸಾವಿರ ರೂ. ಜಮೆ ಮಾಡಲಾಗುವುದು ಎಂದರು.

ಪಶು ಆಸ್ಪತ್ರೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಕೆ.ಯು.ಬಸವರಾಜ, ಹೈನುಗಾರಿಕೆ ಉತ್ತೇಜಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಕೋತಿಗಳ ಉಪಟಳ, ಶಾಲೆ ಕೊಠಡಿ, ಶಿಕ್ಷಕರ ಕೊರತೆ, ಕ್ರೀಡಾ ಸಾಮಗ್ರಿ ಬೇಡಿಕೆ ಸೇರಿ ನಾನಾ ವಿಷಯಗಳ ಬಗ್ಗೆ ಚರ್ಚಿಸಲಾಯಿತು.