ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಆಶಯ
ಸಕಲೇಶಪುರ : ತುರ್ತುಪರಿಸ್ಥಿತಿಯಂತಹ ಕೆಟ್ಟ ದಿನಗಳು ಮತ್ತೊಮ್ಮೆ ದೇಶಕ್ಕೆ ಬರಬಾರದು ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ಕರಾಳ ದಿನಗಳ 50 ವರ್ಷ’ ಅಭಿಯಾನದಲ್ಲಿ ಅವರು ಮಾತನಾಡಿದರು. ಭಾರತದ ಪ್ರಜಾಪ್ರಭುತ್ವ ಉಳಿವಿಗಾಗಿ ದೇಶಾದ್ಯಂತ ಹೋರಾಟಗಳು ನಡೆದಿವೆ. ಇತಿಹಾಸದಿಂದ ಪಾಠ ಕಲಿತು ವರ್ತಮಾನದಲ್ಲಿ ನಾವು ಬದುಕು ರೂಪಿಸಿಕೊಳ್ಳ ಬೇಕಾಗಿದೆ. ಆದ್ದರಿಂದ ಮುಂಬರುವ ಕಾಲಘಟ್ಟದಲ್ಲಿ
ತುರ್ತುಪರಿಸ್ಥಿತಿಯಂತಹ ಕೆಟ್ಟ ಪರಿಸ್ಥಿತಿ ಮತ್ತೊಮ್ಮೆ ಬಾರದಿರುವಂತೆ ಜಾಗೃತಿ ವಹಿಸಬೇಕಿದೆ ಎಂದರು.
ಸಂವಿಧಾನವನ್ನು ನಾವು ದೇಶದ ಆತ್ಮ ಎಂದು ಕರೆಯುತ್ತವೆ. ಇಂತಹ ಸಂವಿಧಾನವನ್ನು ಇಂದಿರಾಗಾಂದಿಯುವರು ಕೊಲೆ ಮಾಡಿದ್ದರು. ದೇಶದ ಸಂವಿಧಾನ ರಚನೆಯ ವೇಳೆ ದೇಶದ ಭವಿಷ್ಯ ಹೇಗಿರ ಬೇಕು ಎಂದು ದೀರ್ಘಕಾಲ ಚರ್ಚೆ ನಡೆಸಿ ರೂಪಿಸಿರುವುದೇ ಭಾರತದ ವಿಶೇಷ. ಸಂವಿಧಾನ ಎಷ್ಟೇ ಮಹೋನ್ನತವಾಗಿದ್ದರೂ ಆಳುವವರ ಮೇಲೆ ಸಂವಿಧಾನದ ಆಶಯ ನಿಂತಿರುತ್ತದೆ. ಸ್ವಾರ್ಥದ ಹಿತಕ್ಕೆ ಬಳಸಿಕೊಂಡರೆ ಸಂವಿಧಾನ ಹಾಳಾಗಲಿದೆ. ಇಂತಹ ಘಟನೆ 1975 ರಲ್ಲಿ ನಡೆದಿತ್ತು. ಮತ್ತೊಮ್ಮೆ ತುರ್ತು ಪರಿಸ್ಥಿತಿ ಜಾರಿಗೆ ಬರಬಾರದು ಎಂಬ ಕಾರಣಕ್ಕೆ ಜಾಗೃತಿಮೂಡಿಸಲು ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಶಾಸಕ ಸಿಮೆಂಟ್ ಮಂಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುರ್ತು ಪರಿಸ್ಥಿತಿ ಕೊನೆಗೊಳ್ಳುವ ಮೂಲಕ 1977 ರಲ್ಲಿ ದೇಶಕ್ಕೆ ಎರಡನೇ ಬಾರಿ ಸ್ವಾತಂತ್ರೃ ಲಭಿಸಿದಂತಾಗಿದೆ ಎಂದರು. ತುರ್ತುಪರಿಸ್ಥಿತಿ ಸಂದರ್ಭ ವಿರೋಧ ಪಕ್ಷದ ನಾಯಕರಿಗೆ ದೊಡ್ಡ ಪ್ರಮಾಣದ ಚಿತ್ರಹಿಂಸೆ ನೀಡಲಾಗಿತ್ತು. ವಯಕ್ತಿಕ ಸ್ವಾತಂತ್ರೃ ಸೇರಿದಂತೆ ಎಲ್ಲ ರೀತಿಯ ಹಕ್ಕುಗಳನ್ನು ಹರಣ ಮಾಡಲಾಗಿತ್ತು. ಆಡಳಿತಗಾರರು ಸರ್ವಾಧಿಕಾರಿಗಳಾದಾಗ ತುರ್ತು ಪರಿಸ್ಥಿತಿಯಂತಹ ಕೆಟ್ಟ ದಿನಗಳನ್ನು ದೇಶ ಅನುಭವಿಸ ಬೇಕಾಗುತ್ತದೆ. ಶ್ರೇಷ್ಠ ಸಂವಿಧಾನ ಹೊಂದಿರುವ ದೇಶವನ್ನೇ ‘ತುರ್ತು ಪರಿಸ್ಥಿತಿ’ ಕಡೆಗೆ ಕೊಂಡೊಯ್ಯಲು ಮುಖ್ಯ ಕಾರಣ ಎಂದರೆ ಆಳುವವರ ಅಧಿಕಾರದ ಹಪಾಹಪಿ ಎಂದು ಅವರು ವಿಷಾದಿಸಿದರು.
ಸನ್ಮಾನ: ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ ಜಿಲ್ಲೆಯ ಹಲವು ಮುಖಂಡರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ. ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವತ್ಥ, ಮುಖಂಡರಾದ ಸತ್ಯನಾರಾಯಣ ಗುಪ್ತ, ರೇಣುಕಾರಾಧ್ಯ, ಅಮಿತ್ ಶೆಟ್ಟಿ, ಗಿರೀಶ್, ಕ್ಯಾಮನಹಳ್ಳಿ ರಾಜ್‌ಕುಮಾರ್ ಇತರರು ಇದ್ದರು.