| ರವಿ ಗೋಸಾವಿ ಬೆಳಗಾವಿ
ಕರೊನಾ ಭೀತಿಯಲ್ಲಿರುವ ಜನತೆ ಕೆಮ್ಮು, ನೆಗಡಿ, ಶೀತ ಹಾಗೂ ಜ್ವರಕ್ಕೂ ಚಿಕಿತ್ಸೆಗೆ ಬರುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಸೋಂಕು ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕೆಯಾಗಿ ಜನ ಸಂದಣಿ ತಪ್ಪಿಸಲು ವೈದ್ಯಾಧಿಕಾರಿಗಳು ತುರ್ತು ಸಂದರ್ಭದಲ್ಲಿ ಮಾತ್ರ ಆಸ್ಪತ್ರೆಗೆ ಬನ್ನಿ ಎಂದು ಸಾರ್ವಜನಿಕರಿಗೆ ಸಲಹೆ ನೀಡುವಂತಾಗಿದೆ.
ಕರೊನಾ ಹರಡುವಿಕೆ ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪುಗೂಡುವುದನ್ನು ತಡೆಯಲು ಜಿಲ್ಲಾಡಳಿತ ಹಲವು ಕಾರ್ಯಕ್ರಮಗಳಿಗೆ ನಿಬರ್ಂಧ ವಿಧಿಸಿದೆ. ಅಲ್ಲದೆ, ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಈ ನಡುವೆ ನೆಗಡಿ- ಜ್ವರಕ್ಕೂ ಸೋಂಕಿನ ಆತಂಕದಿಂದ ತಪಾಸಣೆಗಾಗಿ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಅನಗತ್ಯವಾಗಿ ಬರುವುದನ್ನು ತಪ್ಪಿಸುವುದೂ ವೈದ್ಯರಿಗೆ ದುಸ್ತರವಾಗುತ್ತಿದೆ.
ಸಣ್ಣ ಪುಟ್ಟ ಕಾಯಿಲೆ, ಹಲ್ಲಿನ ಸಮಸ್ಯೆ ಹೊಂದಿರುವವರು ಸೇರಿ ಇತರ ರೋಗಿಗಳು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯಬಹುದು. ಅನಿವಾರ್ಯ ಮತ್ತು ತುರ್ತು ಚಿಕಿತ್ಸೆಗಳಿಗೆ ಮಾತ್ರ ಆಸ್ಪತ್ರೆಗೆ ಬಂದರೆ ಸಾಕು. ರೋಗಿಗಳನ್ನು ನೋಡುವುದಕ್ಕೂ ಅವರ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಬೇಡ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿಗಳದೇ ತಲೆನೋವು: ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳಿಗಾಗಿ ಈಗಾಗಲೇ ಒಳರೋಗಿಗಳಾಗಿ ದಾಖಲಾದವರನ್ನು ನೋಡಲು ಕುಟುಂಬದ ಸದ್ಯಸರು, ನೆಂಟರು ಬರುತ್ತಿರುವುದನ್ನು ನಿಭಾಯಿಸುವುದು ಆಸ್ಪತ್ರೆಯ ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ. ಎಂದಿನಂತೆ ಇದ್ದಿದ್ದರೆ ಸಮಸ್ಯೆ ಇಲ್ಲ. ಕರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಎಲ್ಲರೂ ಎಚ್ಚರವಾಗಿರಬೇಕು. ಹಾಗಾಗಿ, ಜನರು ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಬಂದರೆ ಒಳ್ಳೆಯದು ಎನ್ನುತ್ತಾರೆ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು.
ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ಅವರ ಸಂಬಂಧಿಕರ ಆರೋಗ್ಯ ಕಾಪಾಡುವುದು ನಮ್ಮ ಆಸ್ಪತ್ರೆಯ ಮುಖ್ಯ ಆದ್ಯತೆ. ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ದಾಖಲಾಗಿರುವ ರೋಗಿಗಳನ್ನು ಭೇಟಿ ಮಾಡಲು ಸಂಜೆ 5 ರಿಂದ 6ರ ವರೆಗೆ ಮಾತ್ರ ಸಮಯಾವಕಾಶ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಂಬಂಧಿಕರು ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಯಲು ಸಹಕಾರಿಯಾಗಲಿದೆ.| ಡಾ. ಎಂ.ವಿ. ಜಾಲಿ ವೈದ್ಯಕೀಯ ನಿರ್ದೇಶಕ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆನೆಗಡಿ, ಕೆಮ್ಮು ಇರುವವರು ಸಹ ಆಸ್ಪತ್ರೆಗೆ ಬಂದು ಸಂಶಯದಿಂದ ಕರೊನಾ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ವಿದೇಶದಿಂದ ಬಂದವರು ಮತ್ತು ವಿದೇಶದಿಂದ ಬಂದವರ ಸಂಪರ್ಕದಲ್ಲಿದ್ದವರಲ್ಲಿ ಕೆಮ್ಮು, ಶೀತ ಹಾಗೂ ಜ್ವರ ಇದ್ದರೆ ಮಾತ್ರ ಆಸ್ಪತ್ರೆಗೆ ಆಗಮಿಸಿ, ಸೂಕ್ತ ಚಿಕಿತ್ಸೆ ಪಡೆಯಬಹದು. ಉಳಿದವರು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ.| ಡಾ. ವಿನಯ ದಾಸ್ತಿಕೊಪ್ಪ ಬಿಮ್ಸ್ ನಿರ್ದೇಶಕ