ಜಿಲ್ಲೆ

ತುರ್ತು ಆರೈಕೆಗೆ ತರಬೇತಿ ಕಾರ್ಯಾಗಾರ ಅಗತ್ಯ

ಮರಿದೇವ ಹೂಗಾರ
ಹುಬ್ಬಳ್ಳಿ: ತುರ್ತು ಚಿಕಿತ್ಸಾ ಘಟಕವು ಆಸ್ಪತ್ರೆಯಲ್ಲಿನ ಪ್ರಮುಖ ವಿಭಾಗಗಳಲ್ಲಿ ಒಂದು. ತೀವ್ರ ಅಸ್ವಸ್ಥ ರೋಗಿಗಳ ತುರ್ತು ಆರೈಕೆಯಲ್ಲಿ ಶುಶ್ರೂಷಕರು ನಿರ್ವಹಿಸಬೇಕಾದ ವೃತ್ತಿ ಕೌಶಲ, ಕೈಗೊಳ್ಳಬಹುದಾದ ಕ್ಷಿಪ್ರ ಕ್ರಮಗಳ ಬಗ್ಗೆ ಅರಿವು ಮೂಡಿಸಲು ತರಬೇತಿ ಕಾರ್ಯಾಗಾರಗಳು ಅತ್ಯಗತ್ಯ ಎಂದು ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಹಾಗೂ ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿಕಿರಣ ತಿಳಿಸಿದರು.
ಮುಂಬೈನ ಪ್ರತಿಷ್ಠಿತ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಆ್ಯಂಡ್ ಮಿನಿಮಲ್ ಅಕ್ಸೆಸ್ ಸರ್ಜರಿ ಟ್ರೈನಿಂಗ್ (ಐ.ಎಂ.ಎಂ.ಎ.ಎಸ್.ಟಿ) ಸಂಸ್ಥೆ ವತಿಯಿಂದ ನಿರಂತರ ನರ್ಸಿಂಗ್ ಶಿಕ್ಷಣ(ಸಿ.ಎನ್.ಇ)ದಡಿ ನಗರದ ಬಾಲಾಜಿ ಆಸ್ಪತ್ರೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕ್ರಿಟಿಕಲ್ ಕೇರ್ ನರ್ಸಿಂಗ್ ಎಕ್ಸ್‌ಲೆನ್ಸ್ ವಿಷಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
 ವೈದ್ಯರು ರೋಗಿಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನಡೆಸಿದ ನಂತರ ರೋಗಿಯ ಆರೋಗ್ಯ ಸುಧಾರಣೆಯ ಹೊಣೆ ಶುಶ್ರೂಷಕರ ಮೇಲಿರುತ್ತದೆ. ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗುವ ಪ್ರತಿ ರೋಗಿಗಳಿಗೆ ಹೆಚ್ಚಿನ ಆರೋಗ್ಯ ಕಾಳಜಿಯ ಅಗತ್ಯವಿದ್ದು, ಈ ವೇಳೆ ಕೆಲ ನಿಮಿಷಗಳ ವಿಳಂಬವೂ ರೋಗಿಯ ಜೀವಕ್ಕೆ ಹಾನಿಯನ್ನುಂಟು ಮಾಡಬಹುದು ಎಂದರು.
ಮುಂಬೈನ ಐಎಂಎಂಎಎಸ್‌ಟಿಯ ತರಬೇತುದಾರ ಡಾ. ವಿದ್ಯುನ್ಮಾಲ ಅಗರವಾಲ್ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಶುಶ್ರೂಷಕರಿಗೆ ತಾಳ್ಮೆ ಹಾಗೂ ಮಾನವೀಯ ಗುಣಗಳ ಜತೆಗೆ ವೃತ್ತಿ ನಾವೀನ್ಯತೆ, ಕೌಶಲ ವೃದ್ಧಿಗೆ ನಿರಂತರ ಕಲಿಕೆ ಹಾಗೂ ತರಬೇತಿ ಕಾರ್ಯಾಗಾರಗಳು ಅತ್ಯಗತ್ಯ ಎಂದರು.
 ತರಬೇತುದಾರರಾದ ಡಾ. ಇಂದ್ರಶ್ರೀ ದುಸಾನೆ, ಡಾ. ಪ್ರಶಾಂತ ಮುಲಿಕ್ ಪ್ರಾತ್ಯಕ್ಷಿಕೆ ನೀಡಿದರು.