ಜಿಲ್ಲೆ

ಭ್ರಷ್ಟ್ರರನ್ನು ಬೀದಿಗೆಳೆವ ಎದೆಗಾರಿಕೆ ಮೈಗೂಡಿಸಿಕೊಳ್ಳಿರಿ: ಡಾ. ಬಿ.ಆರ್​​.ಮಂಜುಳಾ ಸಲಹೆ

ಬೆಂಗಳೂರು: ಉತ್ತಮ ಸಮಾಜದ ವೈರಿಗಳಾದ ಲಂಚಕೋರರು, ಭ್ರಷ್ಟ ವ್ಯಕ್ತಿಗಳ ವಿರುದ್ಧ ಬಹಿರಂಗವಾಗಿ ದನಿಯೆತ್ತುವ ಎದೆಗಾರಿಕೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ರಾಜೀವ್‌ಗಾಂಧಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಬಿ.ಆರ್. ಮಂಜುಳಾ ಹೇಳಿದ್ದಾರೆ.

ಮಲ್ಲೇಶ್ವರದ ಕೋದಂಡರಾಮಪುರದಲ್ಲಿರುವ ರಾಜೀವ್‌ಗಾಂಧಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ- 2024 ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಎಲ್ಲಕಾಲಕ್ಕೂ ಲಂಚ ಮತ್ತು ಭ್ರಷ್ಟತನ ಸಮಾಜವನ್ನು ಕಿತ್ತು ತಿನ್ನುವಂತಹ ಮಾರಕವ್ಯಾಧಿ ಆಗಿರುತ್ತದೆ. ಅಧಿಕಾರಸ್ಥರಲ್ಲಿ ಬೇರೂರಿರುವ ಈ ಅನಿಷ್ಟವನ್ನು ಕತ್ತೆಸೆಯಬೇಕಾದರೆ ಮೊದಲು ಜನರು ಭ್ರಷ್ಟರನ್ನು ಹಾದಿ ಬೀದಿಗಳಲ್ಲಿ ನೇರವಾಗಿ ಪ್ರಶ್ನಿಸುವಂತಾಗಬೇಕು. ಇಂತಹ ಗಟ್ಟಿತನ ಪ್ರತಿಯೊಬ್ಬರಿಗೂ ಇದ್ದಾಗ ಮಾತ್ರ ಲಂಚಕೋರರಲ್ಲಿ ಹೆದರಿಕೆ ಉಂಟಾಗುತ್ತದೆ. ಎಲ್ಲಿಯವರೆಗೆ ನಾವು ಭ್ರಷ್ಟರನ್ನು ಬಹಿರಂಗವಾಗಿ ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೂ ಇದರ ಮೂಲೋತ್ಪಾಟನೆ ಅಸಾಧ್ಯ ಎಂದು ಹೇಳಿದರು.

ಲಂಚಗುಳಿತನಕ್ಕೆ ಕುಮ್ಮಕ್ಕು ಸಲ್ಲ:

ಉಪನ್ಯಾಸಕ ಪ್ರೊ. ಭಾಸ್ಕರ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಕೆಲ ಸ್ವಲಾಭ ಹಾಗೂ ಸ್ವಾರ್ಥಚಿಂತಕರ ಸ್ವಹಿತಾಸಕ್ತಿಯಿಂದಾಗಿ ಲೋಭನದಿಂದ ಭ್ರಷ್ಟಾಚಾರ ಬ್ರಹ್ಮರಾಕ್ಞಸ ಸ್ವರೂಪ ತಾಳಿದೆ. ಇದಕ್ಕೆ ಸಮಾಜದಲ್ಲಿ ಯಾರಿಂದಲೂ ಬೆಂಲ ಅಥವಾ ಕುಮ್ಮಕ್ಕು ನೀಡಬಾರದು. ಇಂತಹ ಪ್ರವೃತ್ತಿಯಿಂದ ಸಮಾಜ ದೂರ ಉಳಿದಾಗ ಮಾತ್ರ ಸಜ್ಜನರು ಉಸಿರಾಡಲು ಸಾಧ್ಯ ಎಂದರು.

ಇದೇ ವೇಳೆ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಕಾಲೇಜಿನ ಕಾನೂನು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜೀವ್‌ಗಾಂಧಿ ಕಾನೂನು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಮರಿಸ್ವಾಮಿಗೌಡ, ಪ್ರೊ. ಶಿವಪ್ರಸಾದ್, ಪ್ರೊ. ಉದಯ್‌ಕುಮಾರ್ ಉಪಸ್ಥಿತರಿದ್ದರು.