ಮದ್ದೂರು: ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಮೂಲಕ ಮಹನೀಯರ ಆಶಯಗಳನ್ನು ಈಡೇರಿಸಬೇಕೆಂದು ಚುಂಚುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಪ್ರೊ.ಬಿ.ಕೃಷ್ಣ ತಿಳಿಸಿದರು.
ಪಟ್ಟಣದ ಟೌನ್ ಕ್ಲಬ್‌ನಲ್ಲಿ ಚುಂಚುಶ್ರೀ ಗೆಳೆಯರ ಬಳಗ, ಟೌನ್ ಕ್ಲಬ್ ಮತ್ತು ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದ ವೇಳೆ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ಸರ್ವರಿಗೂ ಸಮಾನತೆಯ ಸಂದೇಶ ನೀಡುವ ಮೂಲಕ ಇಡೀ ವಿಶ್ವದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಬಸವಣ್ಣನವರ ತತ್ವ ಸಂದೇಶಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿದ್ದು, ಮುಂದಿನ ತಲೆಮಾರಿಗೂ ಅತ್ಯವಶ್ಯಕವಾಗಿದೆ ಎಂದು ಬಣ್ಣಿಸಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಹೆಜ್ಜೆಯಿಡುವ ಮೂಲಕ ಅವರು ಕಂಡ ಕನಸನ್ನು ನನಸು ಮಾಡಬೇಕು ಎಂದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆಧ್ಯಾತ್ಮಿಕವಾಗಿ ಹೊಸ ಕ್ರಾಂತಿಗೆ ಬಸವಣ್ಣನವರು ಹಾಕಿಕೊಟ್ಟ ಅಡಿಪಾಯದಿಂದಲೇ ಪ್ರಪಂಚದಾದ್ಯಂತ ಹಲವಾರು ಕ್ರಾಂತಿಕಾರಿ ಬದಲಾವಣೆಗಳು ಸೃಷ್ಟಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಹನೀಯರ ಆದರ್ಶಗಳು ಕಣ್ಮರೆಯಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಜನಾಂಗದ ಕಾರ್ಯ ಆತಂಕಕಾರಿ ವಿಚಾರ ಎಂದು ಹೇಳಿದರು.
ಬಸವಣ್ಣನವರ ಚಿಂತನೆಗಳ ಜತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬಸವಣ್ಣನವರ ಕನಸುಗಳನ್ನು ನನಸು ಮಾಡಬೇಕು. ಬಸವ ಜಯಂತಿ ಕೇವಲ ಆಚರಣೆಗಷ್ಟೇ ಸೀಮಿತವಾಗದೆ ಬದುಕಿನುದ್ದಕ್ಕೂ ಅವರ ಆದರ್ಶ ಅಳವಡಿಸಿಕೊಂಡು ಸಾಮಾಜಿಕ ಕಾರ್ಯ ಮಾಡಬೇಕು. ಮುಂದಿನ ಯುವ ಪೀಳಿಗೆಗೂ ಅವರ ಪರಿಚಯಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಅಭಿನಂದನೆ: ಹೆಮ್ಮನಹಳ್ಳಿ ಗ್ರಾ.ಪಂ. ಪಿಡಿಒ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಲೀಲಾವತಿ ಅವರನ್ನು ಸಂಘಟನೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಚುಂಚುಶ್ರೀ ಗೆಳೆಯರ ಬಳಗದ ಕಾರ್ಯದರ್ಶಿ ವಿ.ಟಿ.ರವಿಕುಮಾರ್, ಪದಾಧಿಕಾರಿಗಳಾದ ದೊರೆಸ್ವಾಮಿ, ಚನ್ನಯ್ಯ, ಎಂ.ಎ.ಕೃಷ್ಣ, ಎಸ್.ಎಸ್.ಚಂದ್ರು, ಶಂಕರೇಗೌಡ, ನಾರಾಯಣ್, ಎಂ.ಟಿ.ವೆಂಕಟೇಶ್ ಇತರರಿದ್ದರು.