ಜಿಲ್ಲೆ

ಆಧುನಿಕತೆ ಅಳವಡಿಸಿಕೊಳ್ಳಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸದಾ ತಮ್ಮನ್ನು ಆಧುನಿಕತೆಗೆ ಅಳವಡಿಸಿಕೊಳ್ಳಬೇಕು ಎಂದು ಎಸ್‌ಡಿಎಂ ವಿಶ್ವ ವಿದ್ಯಾಲಯದ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಇಲ್ಲಿನ ಸತ್ತೂರಿನ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್‌ಡಿಎಂ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಲು ಶ್ರೇಷ್ಠತೆ, ಜೇಷ್ಠತೆಗಳೇ ಕಾರಣ. ನಮ್ಮ 3 ಪ್ರಕೃತಿ ಚಿಕಿತ್ಸಾ ಕೇಂದ್ರಗಳು ರೋಗ ಬಾರದಂತೆ ಮತ್ತು ಬದಲಾವಣೆಯ ಜೀವನ ಶೈಲಿ ಬಗ್ಗೆ ಮಾಹಿತಿ ನೀಡುತ್ತವೆ. ವಿದ್ಯಾರ್ಥಿಗಳು ತುಂಬುವ ಶುಲ್ಕದಿಂದ ಅವರಿಗೆ ಬೇಕಾದ ಉತ್ತಮ ವೈದ್ಯಕೀಯ ಶಿಕ್ಷಣ ಮತ್ತು ಆಧುನಿಕ ಯಂತ್ರಗಳ (ಉಪಕರಣ) ಮೂಲಕ ಅಧ್ಯಯನ ನೀಡಲಾಗುತ್ತದೆ ಎಂದರು.
ಡಾ. ರಮೇಶ ಮುಧೋಳ ಮಾತನಾಡಿ, ಜೆಎಸ್‌ಎಸ್ ಎಸ್‌ಡಿಎಂ ವಿದ್ಯಾ ಸಂಸ್ಥೆಗಳಿಗೆ ಸ್ಫೂರ್ತಿ. ಭಗವತ್ ಜ್ಞಾನ ಮತ್ತು ಮಾನವೀಯತೆ ಎಸ್‌ಡಿಎಂನ ಪ್ರಮುಖ ಅಂಶಗಳು. ಸಂಸ್ಥೆಗಳು ಬೆಳೆಯಲು ಆಡಳಿತ ಮಂಡಳಿಯ ಸಹಕಾರದ ಜತೆಗೆ ಉದ್ಯೋಗಿಗಳ ಸೇವಾ ಮನೋಭಾವ ಅತೀ ಮುಖ್ಯವಾಗಿದೆ ಎಂದರು.
ಬೆಂಗಳೂರಿನ ಕ್ಷೇಮವನ ಕಾರ್ಯ ನಿರ್ವಾಹಕ ನಿದೇರ್ಶಕಿ ಶ್ರದ್ಧಾ ಅಮಿತ್ ಲಕ್ಕಿ ಡ್ರಾ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಾದ ಕವನಾ ಮತ್ತು ಯಶವಂತ ಅವರಿಗೆ ಉಚಿತ ವೈದ್ಯಕೀಯ ಪುಸ್ತಕಗಳನ್ನು ನೀಡಿದರು. ಉಜಿರೆಯ ಸಿರಿ ಗ್ರಾಮೋದ್ಯೋಗದ ಅಧ್ಯಕ್ಷೆ ಹೇಮಾವತಿ ಹೆಗ್ಗಡೆ, ಎಸ್‌ಡಿಎಂ ವಿವಿ ಉಪಕುಲಪತಿ ಡಾ. ನಿರಂಜನಕುಮಾರ, ಡಾ. ಎಸ್. ಕೆ. ದೇಶಪಾಂಡೆ, ವಿದ್ಯಾರ್ಥಿಗಳು, ಇತರರು ಇದ್ದರು.
ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ ಸ್ವಾಗತಿಸಿದರು. ಡಾ. ದೀಪಕ ಕಣಬೂರು ಪ್ರಮಾಣ ವಚನ ಬೋಧಿಸಿದರು. ಡಾ. ಅಶ್ವಿನಿ ಮತ್ತು ಡಾ. ಸಂದೇಶ ಅಕ್ಕಿ ನಿರೂಪಿಸಿದರು. ಡಾ. ವಿಜಯ್ ಕುಲಕರ್ಣಿ ವಂದಿಸಿದರು.