ಕಡೂರು: ಕನ್ನಡ ತನವನ್ನು ಕೇವಲ ಬಾಯಿ ಮಾತಿಗೆ ಹೇಳುವುದರ ಬದಲು ಅದನ್ನು ಪೋಷಿಸಿಕೊಂಡು ಹೋಗುವ ಮನಸ್ಸುಗಳು ಅಗತ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಕೆಎಲ್‌ವಿ ವೃತ್ತದ ಸಮೀಪ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದಿಂದ ಭುವನೇಶ್ವರಿ ಪುತ್ಥಳಿ ಅನಾವರಣದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ನಮ್ಮೆಲ್ಲರ ಆಡಳಿತ ಭಾಷೆ, ಕನ್ನಡ ಮತ್ತು ನಾಡು, ನುಡಿ ಬಿಟ್ಟು ಜೀವಿಸಲು ಸಾಧ್ಯವಿಲ್ಲ. ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪನೆಗೆ ಕಸಾಪ ಮಹಿಳಾ ಘಟಕ ಕಳೆದ ಒಂದುವರೆ ವರ್ಷಗಳಿಂದಲೂ ಬೇಡಿಕೆ ಸಲ್ಲಿಸಿತ್ತು. ಅವರಿಗೆ ಪುರಸಭೆಯಿಂದ ಎರಡು ಸ್ಥಳ ನೀಡಲಾಗಿತ್ತು. ಅದರಲ್ಲಿ ಪಟ್ಟಣದ ಹೃದಯ ಭಾಗ ಕೆಎಲ್‌ವಿ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಹೆಚ್ಚು ಕೂಲಿ ಕಾರ್ಮಿಕರ ಮಕ್ಕಳು ವ್ಯಾಸಂಗ ಮಾಡುವ ಸರ್ಕಾರಿ ಶಾಲೆಯನ್ನು ಪುರಸಭೆಯಿಂದ ದತ್ತು ಪಡೆದು ಸಮಗ್ರ ಅಭಿವೃದ್ಧಿಗೆ ಒತ್ತುಕೊಡುವ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೆ ಕಸಾಪ ಘಟಕಗಳ ಸಹಕಾರವು ಅಗತ್ಯ. ಕನ್ನಡದ ಅಭಿಮಾನವನ್ನು ಕೇವಲ ಬಾಯಿಮಾತಿನಲ್ಲಿ ತೋರಿಸಿದೆ ಮಾಡುವ ಕಾಯಕದಲ್ಲಿ ಮೈಗೂಡಿಸಿಕೊಂಡಾಗ ನಮ್ಮ ಭಾಷೆ ಮೇಲಿನ ಅಭಿಮಾನದ ಆತ್ಮತೃಪ್ತಿ ಸಿಗಲಿದೆ ಎಂದರು.
ಶಾಸಕ ಕೆ.ಎಸ್.ಆನಂದ್ ಭುವನೇಶ್ವರಿ ಪುತ್ಥಳಿ ಅನಾವರಣಗೊಳಿಸಿದರು. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷ ಲತಾ ರಾಜಶೇಖರ್, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಮರುಗುದ್ದಿ ಮನು, ಮೋಹನ್, ಮಹಿಳಾ ಘಟಕದ ಜಿಲ್ಲಾ ಗೌರವಾಧ್ಯಕ್ಷೆ ನಿರ್ಮಲ ಮಚ್ಚೆಗೌಡ, ಕಸಾಪ ತಾಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಹಿರಿಯ ವಕೀಲ ಶಿವಕುಮಾರ್, ಕೆ.ಪಿ.ರಾಘವೇಂದ್ರ, ಮಂಜುನಾಥ್, ರೂಪಾನಾಯ್ಕ ಮತ್ತಿತರಿದ್ದರು.